ವೀ.ವಿ. ಸಂಘದ ಚುನಾವಣೆ; ಸಂಜೆ ವೇಳೆಗೆ ಫಲಿತಾಂಶಮತ ಎಣಿಕೆ ಮುಂದುವರಿಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.18: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ 2024-27ನೇ ಸಾಲಿನ ಕಾರ್ಯಕಾರಿ ಸಮಿತಿಯ 30 ಸದಸ್ಯ ಸ್ಥಾನಗಳಿಗೆ ನಿನ್ನೆ ಮತದಾನ ನಡೆಯಿತು.
2047 ಮತದರಾರು ಮತ ಚಲಾಯಿಸಿದ್ದು ಮತಗಳ ಎಣಿಕೆ ಕಾರ್ಯ ನಗರದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 9 ಗಂಟೆಯಿಂದ ಪ್ರಾರಂಭಗೊಂಡಿದ್ದು, ಎಣಿಕೆ ಪ್ರಕ್ರಿಯೆ ಮುಂದುವರೆದಿದ್ದು ಸಂಜೆ 4ರ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.
ಎಣಿಕೆ ಕಾರ್ಯಕ್ಕೆ 12 ಕೊಠಡಿಗಳಲ್ಲಿ 24 ಟೇಬಲ್ ವ್ಯವಸ್ಥೆ ಮಾಡಲಾಗಿದೆ. 150ಕ್ಕೂ ಹೆಚ್ಚು ಸಿಬ್ಬಂದಿಗಳು ಎಣಿಕೆ ಕಾರ್ಯದಲ್ಲಿ ಚುನಾವಣಾ ಮುಖ್ಯಾಧಿಕಾರಿ ಲಿಂಗನಗೌಡ ಅವರ ಮಾರ್ಗದರ್ಶನದಂತೆ ತೊಡಗಿದ್ದಾರೆ.
ಮತ ಎಣಿಕೆ ಕೇಂದ್ರದ ಮುಂದೆ ಅಭ್ಯರ್ಥಿಗಳು ಅವರ ನೂರಾರು ಬೆಂಬಲಿಗರು ಫಲಿತಾಂಶಕ್ಕಾಗಿ ಕಾದುಕುಳಿತಿದ್ದರು. ಹಿರಿಯರ ಹಾಗೂ ಯುವಕ ವೃಂದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ಈ ಬಾರಿ ಸಂಘದ ಆಡಳಿತ ಯಾರು ನಡೆಸಬೇಕೆಂದು ತೀರ್ಪು ಸಂಜೆ ಹೊರಬೀಳಲಿದೆ.
ನಗರದ 16, ಗ್ರಾಮೀಣ 14 ಸೇರಿ ಒಟ್ಟು 30 ಸದಸ್ಯ ಸ್ಥಾನಗಳಿಗೆ ವೀ.ವಿ. ಸಂಘದಲ್ಲಿ ಸದಸ್ಯತ್ವ ಹೊಂದಿರುವ ಮತದಾರರು ನಿನ್ನೆ ತಮ್ಮ ಹಕ್ಕು ಚಲಾಯಿಸಿದರು. ನಗರದಿಂದ 36, ಗ್ರಾಮೀಣದಿಂದ 35 ಸೇರಿ ಒಟ್ಟು 71 ಅಭ್ಯರ್ಥಿಗಳು ಕಣದಲ್ಲಿ ಇದ್ದರು.. ಬೆಳಗ್ಗೆ ಸಂಘದ ಸಾಮಾನ್ಯ ನಡೆದ ಬಳಿಕ ಮಧ್ಯಾಹ್ನ 1 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಿತು. ಒಟ್ಟು 2438 ಮತದಾರರ ಪೈಕಿ 2047 ಮತದಾರರು ಹಕ್ಕು ಚಲಾಯಿಸಿದ್ದರು
ಮತದಾನ ನಡೆದ  ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ತಾಂತ್ರಿಕ ಕಾಲೇಜಿನಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಸಂಬಂಧಿಕರು, ಬೆಂಬಲಿಗರು ಸೇರಿ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಆವರಣದಲ್ಲಿ ಸಾಲುಗಟ್ಟಿ ನಿಂತಿದ್ದ ಬೆಂಬಲಿಗರು, ಸಂಬಂಧಿಗಳು ತಮ್ಮ ಅಭ್ಯರ್ಥಿ ಸಂಖ್ಯೆಯುಳ್ಳ ಗುರುತಿನ ಚೀಟಿ ಹಿಡಿದು, ಹಕ್ಕು ಚಲಾಯಿಸಲು ಬರುತ್ತಿದ್ದ ಮತದಾರರಿಗೆ ನೀಡಿ, ತಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.. ಬಿರುಬಿಸಿಲನ್ನು ಲೆಕ್ಕಿಸದೆ ಯಾರೇ ಬಂದರೂ, ಓಟು ಹಾಕಿದ್ರಾ ಎಂದು ಕೇಳುತ್ತಲೇ ನಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದ್ದು ಸಾಮಾನ್ಯವಾಗಿತ್ತು. ಮತದಾನಕ್ಕೆ ಒಟ್ಟು 14 ಮತಗಟ್ಟೆ ವ್ಯವಸ್ಥೆ ಮಾಡಲಾಗಿದ್ದು, ಮತದಾರರು ಸರತಿ ಸಾಲಲ್ಲಿ ನಿಂತು ಹಕ್ಕು ಚಲಾಯಿಸಿದರು.