ವೀ.ವಿ.ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ರಾಜೀನಾಮೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.01: ಜಿಲ್ಲೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಎಂ.ಗುರುಸಿದ್ದಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ವಿ.ಬಸವರಾಜ್ ತಮ್ಮ ಸ್ಥಾನಗಳಿಗೆ ಮಾ.29 ರಂದು ರಾಜೀನಾಮೆ ನೀಡಿದ್ದಾರಂತೆ.
ಸಧ್ಯ ಅವರ ಕಾರ್ಯಭಾರವನ್ನು ಉಪಾಧ್ಯಕ್ಷ  ಅಲ್ಲಂ ಚೆನ್ನಪ್ಪ ಅವರಿಗೆವಹಿಸಿದ್ದಾರಂತೆ.
ಗುರುಸಿದ್ದಸ್ವಾಮಿ ಮತ್ತು ಬಿ.ವಿ. ಬಸವರಾಜ್ ಅವರ ರಾಜೀನಾಮೆ ಅಂಗೀಕಾರ ಮತ್ತು ನೂತನ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ‌ ಮಾಡಲು ಎ.7 ರಂದು‌ ಸಂಘದ  ಕಾರ್ಯಕಾರಿ‌ ಸಮಿತಿ ಸಭೆಯನ್ನು ಉಪಾಧ್ಯಕ್ಷ ಅಲ್ಲಂ ಚೆನ್ನಪ್ಪ ಅವರು ತಮ್ಮ ಅಧ್ಯಕ್ಷತೆಯಲ್ಲಿ ಕರೆದಿದ್ದಾರಂತೆ.
ಗುರುಸಿದ್ದಸ್ವಾಮಿ ಮತ್ತು ಬಿ.ವಿ.ಬಸವರಾಜ್ ಅವರು ರಾಜೀನಾಮೆ ನೀಡಿದ್ದರು. ನಿನ್ನೆ ದಿನ ಅದೇ ಹುದ್ದೆಗಳ ಹೆಸರಲ್ಲಿ ಹಾಸ್ಟಲ್ ಕಟ್ಟಡ ಸಮಾರಂಭದಲ್ಲಿ ಪಾಲ್ಗೊಂಡಿರುವ ಬಗ್ಗೆ ಸಂಘದ ಸದಸ್ಯರು ಅವರ ನೈತಿಕತೆಯನ್ನು ಪ್ರಶ್ನಿಸಿದ್ದಾರೆ.
 ಅದಲು ಬದಲು:
ಈಗ ರಾಜೀನಾಮೆ ನೀಡಿರುವ ಅವರು ಹುದ್ದೆಗಳನ್ನು ಅದಲು ಬದಲು ಮಾಡಿಕೊಳ್ಳಲಿದ್ದಾರಂತೆ. ಈ  ಹಿಂದೆ  ಚುನಾವಣೆ ನಡೆದ ಮೇಲೆ ಆಡಳಿತ ಮಂಡಳಿ ರಚನೆ ಸಂದರ್ಭದಲ್ಲಿ ಸಮುದಾಯದ ಹಿರಿಯ ಮುಖಂಡ ಎನ್.ತಿಪ್ಪಣ್ಣ ಅವರ ಸಮಕ್ಷಮದಲ್ಲಿ ಒಂದನೇ ಅವಧಿಗೆ ಗುರುಸಿದ್ದಸ್ವಾಮಿ ನಂತರ ಬಿ.ವಿ.ಬಸವರಾಜ್ ಅಧ್ಯಕ್ಷರಾಗಬೇಕು ಎಂದು ಒಡಂಬಡಿಕೆ ಆಗಿತ್ತಂತೆ ಅದಕ್ಕಾಗಿ ರಾಜೀನಾಮೆ ನೀಡಿ, ಈಗ ಮತ್ತೆ ಹುದ್ದೆಗಳನ್ನು ಅದಲು ಬದಲು ಮಾಡಿಕೊಂಡು ಸಂಘದ ಆಡಳಿತ ನಡೆಸಲಿದ್ದಾರಂತೆ. ಅದಕ್ಕಾಗಿ‌ ಎ .7 ಕಾರ್ಯಕಾರಿ‌ ಸಮಿತಿ ಸಭೆ ಕರೆದಿದೆ. ಅಂದೇ ರಾಜೀನಾಮೆ ಅಂಗೀಕಾರ ಮತ್ತು ನೂತನ ಅಧ್ಯಕ್ಷ , ಪ್ರಧಾನ ಕಾರ್ಯದರ್ಶಿಯವರ ನೇಮಕ ಮಾಡುತ್ತಾರಂತೆ.
 ಬೈಲಾ ಉಲ್ಲಂಘನೆ:
ಅಂದೇ ರಾಜೀನಾಮೆ ಅಂಗೀಕಾರ, ಅಂದೇ ಅದೇ ಹುದ್ದೆಗಳಿಗೆ ಚುನಾವಣೆ ನಡೆಸಲು ಬರುವುದಿಲ್ಲ. ಇದು ಬೈಲ್ ಉಲ್ಲಂಘನೆಯಾಗಲಿದೆ. ಚುನಾವಣೆ ನಡೆಸಲು 7 ದಿನಗಳ ನೋಟೀಸ್ ನೀಡಬೇಕು ಎಂದು ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಂಗಾಮಿ ಅಧ್ಯಕ್ಷರಾಗಿ ಸಭೆ ಕರೆದಿರುವ ಅಲ್ಲಂ ಚೆನ್ನಪ್ಪ ಅವರಿಗೆ ಪತ್ರ ಬರೆದು ಪ್ರಶ್ನಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ವಿವರಣೆಗಾಗಿ ಪ್ರಶ್ನಿಸಲು ಅಲ್ಲಂ ಚೆನ್ನಪ್ಪ ಅವರಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸುತ್ತಿಲ್ಲ.