ವೀಲ್ ಚೇರ್‌ನಲ್ಲೇ ಮಮತಾ ಪ್ರಚಾರ


ಕೋಲ್ಕತಾ,. ಮಾ.೧೪- ಕಾರಿನ ಬಾಗಿಲು ಬಡಿದು ಕಾಲಿಗೆ ಗಾಯಗಳಾಗಿ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ವೀಲ್ ಚೇರ್ ಮೂಲಕ ಚುನಾವಣಾ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಇಂದು ಮಧ್ಯಾಹ್ನದ ನಂತರ ಹರ್ಜಾ ದಿಂದ ಗಾಂಧಿ ಪ್ರತಿಮೆ ತನಕ ವೀಲ್ ಚೇರ್ ನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದು ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ನಿರ್ಧರಿಸಿದ್ದಾರೆ. ಕಾಲಿಗೆ ಗಾಯಗಳಾಗಿರುವ ಹಿನ್ನಲೆಯಲ್ಲಿ ವೈದ್ಯರು ಕೆಲದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿಯವರು ವೀಲ್ ಚೇರ್ ಹೋಗಿದ್ದಾರೆ.
ಪ್ರಣಾಳಿಕೆ ಮುಂದೂಡಿಕೆ:
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಇಂದು ಬಿಡುಗಡೆ ಮಾಡಬೇಕಾಗಿದ್ದ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಮುಂದೂಡಲಾಗಿದೆ. ಪಕ್ಷ ಬಿಡುಗಡೆ ಮಾಡಲಿರುವ ಚುನಾವಣಾ ಪ್ರಣಾಳಿಕೆಯ ದಿನಾಂಕವನ್ನು ಅತಿ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಮಮತಾ ಬ್ಯಾನರ್ಜಿ ಅವರ ಮೇಲೆ ನಂದಿಗ್ರಾಮದಲ್ಲಿ ಅಪರಿಚಿತರು ದಾಳಿ ಮಾಡಿದ ಹಿನ್ನೆಲೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಪ್ರಣಾಳಿಕೆಯನ್ನು ಇನ್ನೂ ಅಂತಿಮಗೊಳಿಸಿಲ್ಲ ಶೀಘ್ರದಲ್ಲೇ ಅಂತಿಮಗೊಳಿಸಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಪಶ್ಚಿಮಬಂಗಾಳ ವಿಧಾನಸಭೆಗೆ ಈ ತಿಂಗಳ ೨೭ರಿಂದ ಏಪ್ರಿಲ್ ೨೯ರ ತನಕ ೮ ಹಂತದಲ್ಲಿ ಚುನಾವಣೆ ನಡೆಯಲಿದೆ.
ಮೊದಲ ಮತ್ತು ಎರಡನೇ ಹಂತದ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭವಾಗಿದೆ.
ಸತತ ಮೂರನೇ ಬಾರಿಗೆ ಪಶ್ಚಿಮಬಂಗಾಳದಲ್ಲಿ ಅಧಿಕಾರದ ಗದ್ದುಗೆ ಹಿಡಿಯಬೇಕು ಎಂದು ಕನಸು ಕಾಣುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಓಟಕ್ಕೆ ಅಡ್ಡಗಾಲು ಹಾಕಲು ಬಿಜೆಪಿ ತನ್ನದೇ ಆದ ಕಾರ್ಯತಂತ್ರ ರೂಪಿಸಿದೆ.
ಪಶ್ಚಿಮ ಬಂಗಾಳದ ಜನರು ಯಾರಿಗೆ ಮಣೆ ಹಾಕುತ್ತಾರೆ ಎನ್ನುವುದು ಮೇ ತಿಂಗಳ ೨ರಂದು ನಡೆಯಲಿರುವ ಮತಎಣಿಕೆಯಲ್ಲಿ ತಿಳಿಯಲಿದೆ