ವೀರ ಸೈನಿಕರ ಸಾಹಸ, ತ್ಯಾಗ ಯುವ ಪೀಳಿಗೆಗೆ ಮಾದರಿ

ಭಾಲ್ಕಿ:ಜು.27:ಕಾರ್ಗಿಲ್ ಯುದ್ದದಲ್ಲಿ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಹೋರಾಡಿ ಶತ್ರುಗಳಿಂದ ದೇಶವನ್ನು ರಕ್ಷಿಸಿದ ವೀರ ಯೋಧರ ಸಾಹಸ, ಧೈರ್ಯ, ಅದಮ್ಯ ದೇಶಭಕ್ತಿ ಇಂದಿನ ಯುವ ಪೀಳಿಗೆಗೆ ಮಾದರಿ ಎಂದು
ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಪದವಿ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಭಾರತೀಯರು ಎಂದು ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡಾ ಒಂದು. ಜಮ್ಮು ಕಾಶ್ಮೀರದ ಕಾರ್ಗಿಲ್‍ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ರೀತಿ ತುಂಬಾ ರೋಚಕವಾಗಿದೆ ಎಂದು ಹೇಳಿದರು.

ಭಾರತೀಯ ಸೈನಿಕರು ಅಪರೇಶನ್ ವಿಜಯ್ ದ ಮೂಲಕ ಕಾರ್ಗಿಲ್-ಡ್ರಾಸ್ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನವನ್ನು ಈ ದಿನವನ್ನು ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸಲಾಗುತ್ತದೆ. 1999 ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಸುಮಾರು ಎರಡು ತಿಂಗಳುಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಭಾರತ ಮಾತೆ ಸುಮಾರು 527 ಯೋಧರನ್ನು ಕಳೆದುಕೊಂಡಳು ಎಂದು ವಿವರಿಸಿದರು.

ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ದೇಶಭಕ್ತಿ, ದೇಶಸೇವೆಗಿಂತ ಮಿಗಿಲಾದ ಕಾರ್ಯ ಮತ್ತೊಂದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಪ್ರಾಚಾರ್ಯ ಡಾ.ಶೀಲವಂತ ಮಾತನಾಡಿದರು.

ಮಹಾಲಿಂಗ ಸ್ವಾಮೀಜಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಅನಿಲ್ ಕುಮಾರ್ ಪಾಟೀಲ, ಸುಭಾಷ ನೇಳಗೆ, ಪ್ರಶಾಂತ ರೆಡ್ಡಿ, ಶಶಿಕುಮಾರ, ಅಕ್ಕಮಹಾದೇವಿ ಕಪೂರ್ ಸೇರಿದಂತೆ ಇತರರು ಇದ್ದರು .