
ಭಾಲ್ಕಿ:ಸೆ.4: ಭಾರತೀಯ ವೀರ ಯೋಧರ ಸೇವೆ ಅವಿಸ್ಮರಣೀಯವಾಗಿದೆ ಎಂದು ವಿಶ್ವಹಿಂದೂ ಪರಿಷತ್ ಯುವ ಮುಖಂಡ ಶಿವು ಲೋಖಂಡೆ ಅಭಿಪ್ರಾಯಪಟ್ಟರು.
ತಾಲೂಕಿನ ಕುರುಬುಖೇಳಗಿ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ರವಿವಾರ ಆಯೋಜಿಸಿದ್ದ ವೀರ ಯೋಧ ವಿಜಯಕುಮಾರ ಖುಬಾ ರವರ ಸೇವಾ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ವೀರ ಯೋಧರನ್ನು ಸನ್ಮಾನಿಸಿ ಅವರು ಮಾತನಾಡಿದರು. ನಾವೆಲ್ಲರೂ ಇಲ್ಲಿ ಸುಖವಾಗಿ ನಿದ್ರಿಸಲು ನಮ್ಮ ದೇಶ ಕಾಯುವ ವೀರ ಯೋಧರೇ ಕಾರಣ. ಅವರು ತಮ್ಮ ವೈಯಕ್ತಿಕ ಜೀವನದ ಆಸೇ ಆಕಾಂಕ್ಷಗಳನ್ನು ಬದಿಗೊತ್ತಿ ದೇಶ ಕಾಯುವ ಕೆಲಸ ಮಾಡುತ್ತಾರೆ. ಅಂತಹವರಲ್ಲಿ ನಮ್ಮವರೇ ಆದ ವಿಜಯಕುಮಾರ ಖುಬಾ ರವರು ಭಾರತೀಯ ಸೇನೆಯ ಡಿಎಸ್‍ಸಿ ಘಟಕದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಡಿಎಸ್‍ಸಿ (ಡಿಫೆನ್ಸ್ ಸೆಕ್ಯುರಿಟಿ ಕಾಪ್ಸ್) ಸೇವೆಯು ಭಾರತೀಯ ಸೇನೆಯ ಭೂದಳ, ನೌಕಾ ಪಡೆ, ವಾಯುಪಡೆ ಸೇರಿದಂತೆ ಎಲ್ಲಾ ಸೂಕ್ಷ್ಮ ಸ್ಥಾನಗಳಿಗೂ ಭದ್ರತೆಯನ್ನು ಒದಗಿಸುವ ಜವಾಬ್ದಾರಿ ಹೋಂದಿರುವ ಸೇನಾ ತುಕುಡಿಯಾಗಿದೆ. ಇಂತಹ ಸೂಕ್ಷ್ಮ ಸೇನಾ ಸೇವೆಯಲ್ಲಿ ಕಾರ್ಯನಿರ್ವಹಿಸಿ, ನಿವೃತ್ತಿಹೊಂದು ನಮ್ಮ ಮಧ್ಯ ಬಂದಿರುವುದು ನಮ್ಮೆಲ್ಲರಿಗೂ ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅದ್ಯಕ್ಷ ಜಯರಾಜ ದಾಬಶೆಟ್ಟಿ ಸೇನಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಪತ್ರಕರ್ತ ದೀಪಕ ಥಮಕೆ ಡಿಎಸ್‍ಸಿ ಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿಜಯಕುಮಾರ ರವರ ಕಾರ್ಯಕ್ಷಮತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸ ಮಾತನಾಡಿದ ವಿಜಯಕುಮಾರ ಖುಬಾ ಬಸವಣ್ಣನವರ ಕಾಯಕ ತತ್ವದಮೇಲೆ ನಾನು ಕಾರ್ಯನಿರ್ವಹಿಸಿದ್ದೇನೆ, ನನ್ನ ಮೇಲಾಧಿಕಾರಿಗಳು ಒಂದು ಕೆಲಸ ಹೇಳಿದರೆ ನಾನು ನಾಲ್ಕು ಕೆಲಸ ನಿರ್ವಹಿಸಿ ಅವರ ಮೆಚ್ಚುಗೆಗೆ ಪಾತ್ರನಾಗುತ್ತಿದ್ದೆ ಎಂದು ತಮ್ಮ ಸೇವಾ ಅವಧಿಯ ಬಗ್ಗೆ ಮೆಲುಕು ಹಾಕಿದರು. ನಿವೃತ್ತ ಸೇನಾ ನೌಕರರ ಸಂಘದ ಅಧ್ಯಕ್ಷ ಶಿವಶರಣಯ್ಯಾ ಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಹಣಮಂತ ಕಾದೇಪೂರೆ, ಪರಮೇಶ್ವರ ಕಡ್ಯಾಳೆ, ಸಂತೋಷ ಸ್ವಾಮಿ, ಸಿದ್ದಲಿಂಗಪ್ಪ ಸೊನಾಳೆ ಉಪಸ್ಥಿತರಿದ್ದರು.