ವೀರಶೈವ ಸಮಾಜ ಅಪಪ್ರಚಾರಗಳಿಗೆ ಕಿವಿಗೊಡಬೇಡಿ: ಶಾಸಕ ಮನವಿ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.25: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸುಭದ್ರ ರಾಷ್ಟ ನಿರ್ಮಾಣಕ್ಕೆ ಶ್ರಮಿಸುತ್ತಿದ್ದರೆ ರಾಜ್ಯದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒಗ್ಗೂಡಿ ಕೆಲಸ ಮಾಡುತ್ತಾ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಜಿಲ್ಲೆಯ ವೀರಶೈವ ಸಮಾಜ ಯಾವುದೇ ಅಪಪ್ರಚಾರಗಳಿಗೆ ಕಿವಿಗೂಡದೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಬೆಂಬಲಿಸುವಂತೆ ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.
ಪಟ್ಟಣದ ಎಸ್.ಕೆ.ಚಿಕ್ಕಣ್ಣಗೌಡ ಸಮುದಾಯ ಭವನದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಂಬಲ ಸೂಚಿಸುವ ವೀರಶೈವ-ಲಿಂಗಾಯಿತ ಸಮುದಾಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕಾರಣದಲ್ಲಿ ಈ ಹಿಂದೆ ಕುಮಾರಣ್ಣ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ನಡುವೆ ಕೆಲವು ರಾಜಕೀಯ ವ್ಯತ್ಯಾಸಗಳಾಗಿರಬಹುದು. ಇಬ್ಬರು ನಾಯಕರೂ ಭಿನ್ನ ಪಕ್ಷಗಳನ್ನು ಮುನ್ನಡೆಸುತ್ತಿದ್ದಾಗ ರಾಜಕೀಯ ಭಿನ್ನಾಭಿಪ್ರಾಯಗಳು ಸಹಜ. ಆದರೆ ಕರ್ನಾಟಕದ ಸಮಗ್ರ ಅಭಿವೃದ್ದಿಗಾಗಿ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಒಗ್ಗೂಡಿದ್ದು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ವೀರಶೈವ ಸಮಾಜ ತೆನೆಹೊತ್ತ ಮಹಿಳೆಯ ಗುರುತಿಗೆ ಮತ ಚಲಾಯಿಸಿ ಕುಮಾರಣ್ಣನನ್ನು ಅತೀಹೆಚ್ಚು ಬಹುಮತದಿಂದ ಗೆಲ್ಲಿಸಿಕೊಡುವ ಮೂಲಕ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರಿಗೆ ಗೌರವ ತಂದುಕೊಡುವಂತೆ ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.
ಜಿಲ್ಲೆಯಲ್ಲಿ ಏಕೈಕ ಜೆಡಿಎಸ್ ಶಾಸಕನಿದ್ದು ಇವರಿಂದ ಯಾವುದೇ ಅಭಿವೃದ್ದಿ ಸಾಧ್ಯವಿಲ್ಲ. ಜೆಡಿಎಸ್ ಶಾಸಕನ ಕ್ಷೇತ್ರಕ್ಕೆ ಅನುದಾನ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಕೆ.ಆರ್.ಪೇಟೆ ಪಟ್ಣಣದ ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ. ಇದು ಮುಖ್ಯಮಂತ್ರಿಗಳ ಘನತೆಗೆ ತಕ್ಕುದಾದ ಹೇಳಿಕೆಯಲ್ಲ ಎಂದು ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಕಟುವಾಗಿ ಖಂಡಿಸಿದ ಶಾಸಕ ಹೆಚ್.ಟಿ.ಮಂಜು ಮುಖ್ಯಮಂತ್ರಿಗಳಾದವರು ಕರ್ನಾಟಕದ ಸಮಸ್ತ ಪ್ರತಿನಿಧಿಯಾಗಿ ಕೆಲಸ ಮಾಡಬೇಕೇ ಹೊರತು ಶಾಸಕರ ನಡುವೆ ತಾರತಮ್ಯ ಧೋರಣೆ ಹೊಂದಿರಬಾರದು. ಅನುದಾನ ನೀಡುವ ವಿಚಾರದಲ್ಲಿ ಇವರು ತಾರತಮ್ಯ ಮಾಡುವುದಾದರೆ ಕೇಂದ್ರದ ಬಿಜೆಪಿ ಸರ್ಕಾರ ಅನುದಾನ ನೀಡಿಕೆಯಲ್ಲಿ ತಾರತಮ್ಯ ತೋರಿಸುತ್ತಿದೆ ಎಂದು ಟೀಕಿಸುವ ನೈತಿಕತೆ ಮುಖ್ಯಮಂತ್ರಿಗಳಿಗಿಲ್ಲ ಎಂದು ಟೀಕಿಸಿದರು.
ತಾಲೂಕಿನ ಶೀಳನೆರೆ ಹೋಬಳಿಯ ಸಿಂಗಾಪುರ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಇಬ್ಬರು ಕಾರ್ಯಕರ್ತರ ಕುಟುಂಬಗಳ ನಡುವೆ ವೈಯಕ್ತಿಕ ಕಾರಣಕ್ಕಾಗಿ ಗಲಾಟೆ ನಡೆದಿದೆ. ವೈಯಕ್ತಿಕ ಗಲಾಟೆಯನ್ನು ಕೈ ಕಾರ್ಯಕರ್ತನ ಮೇಲೆ ಜೆಡಿಎಸ್ ಕಾರ್ಯಕರ್ತರ ಹಲ್ಲೆ ಎಂದು ಬಿಂಬಿಸಿ ಕೆಲವು ಕಾಂಗ್ರೆಸ್ ಮುಖಂಡರು ರಾಜಕೀಯ ಲಾಭ ಪಡೆಯಲು ಮುಂದಾಗಿದ್ದರು. ಇದು ಜೆಡಿಎಸ್ ಪಕ್ಷದ ಎರಡು ಕುಟುಂಬಗಳ ನಡುವಿನ ವೈಯಕ್ತಿಕ ಗಲಾಟೆ ಎನ್ನುವುದನ್ನು ಪೆÇೀಲಿಸರು ದೃಡಪಡಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಅಶಾಂತಿ ಸೃಷ್ಠಿಸುವ ಕಾಂಗ್ರೆಸ್ಸಿಗರ ಮನಸ್ಥಿತಿಗೆ ನನ್ನ ಧಿಕ್ಕಾರ ಎಂದು ಘೋಷಿಸಿದ ಶಾಸಕ ಹೆಚ್.ಟಿ.ಮಂಜು ನಾನು ಎಲ್ಲಾ ಸಮಾಜಗಳ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದು ವೀರಶೈವ ಸಮಾಜ ಕಾಂಗ್ರೆಸ್ಸಿಗರ ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಕುಮಾರಣ್ಣನ ಪರ ಮತ ಚಲಾಯಿಸುವಂತೆ ಮನವಿ ಮಾಡಿದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ಕ್ಷೇತ್ರದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಕೇವಲ ಗುತ್ತಿಗೆದಾರನಾಗಿದ್ದು ಅವರಿಗೆ ಯಾವುದೇ ರಾಜಕೀಯ ಜ್ಞಾನವಿಲ್ಲ. ಎರಡು ಅವಧಿ ರಾಜ್ಯ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿರುವ ಕುಮಾರಣ್ಣ ಅವರಿಗೆ ರಾಜಕೀಯ ಜ್ಞಾನ ಮತ್ತು ಅನುಭವ ಇದೆ. ಕುಮಾರಣ್ಣ ಚುನಾಯಿತರಾದರೆ ಕೆಂದ್ರದಲ್ಲಿ ಪ್ರಭಾವಿ ಸಚಿವರಾಗುತ್ತಾರೆ. ಇದರ ಲಾಭ ಸಮಸ್ತ ಕರ್ನಾಟಕದ ಜನರಿಗೆ ಸಿಗಲಿದೆ ಎಂದರು. ನನ್ನ ರಾಜಕೀಯ ನಾಯಕರಾದ ಬಿ.ಎಸ್.ಯಡಿಯೂರಪ್ಪ ವೀರಶೈವ ಸಮಾಜಕ್ಕೆ ಸೇರಿದವರು. ನಮ್ಮದೇ ತಾಲೂಕಿನ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಏಕೈಕ ಉದ್ದೇಶದಿಂದ ನನಗೆ ರಾಜಕೀಯ ಶಕ್ತಿ ನೀಡಿ ಎರಡು ಅವಧಿ ಶಾಸಕನನ್ನಾಗಿಸಿದ ಜೆಡಿಎಸ್ ಪಕ್ಷವನ್ನು ತ್ಯಜಿಸಿದೆ. ಕ್ಷೇತ್ರದ ಅಭಿವೃದ್ದಿಗಾಗಿ ನಾನು ಬಿಜೆಪಿ ಸೇರಿದೆ. ಮಂತ್ರಿಯಾಗಿ ನಾನು ಚುನಾವಣೆಯಲ್ಲಿ ಸೋತಿದ್ದಕ್ಕಾಗಿ ನನಗೆ ಬೇಸರವಿಲ್ಲ. ನನಗೆ ರಾಜಕೀಯ ಶಕ್ತಿ ನೀಡಿದ ಜೆಡಿಎಸ್ ಪಕ್ಷದ ಹೆಚ್.ಟಿ.ಮಂಜು ಶಾಸಕರಾಗಿರುವ ಕಾರಣದಿಂದ ನನ್ನ ಸೋಲಿನ ನೋವನ್ನು ನಾನು ಮರೆತಿದ್ದೇನೆ. ನನ್ನ ದೇಹದಲ್ಲಿ ಕೊನೆಯ ಉಸಿರಿರುವವರೆಗೂ ನಾನು ಯಡಿಯೂರಪ್ಪ ಅವರಿಗೆ ಮೋಸ ಮಾಡುವುದಿಲ್ಲ. ಕ್ಷೇತ್ರದ ವೀರಶೈವ ಸಮಾಜದ ಜನ ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ತೆನೆಹೊತ್ತ ಮಹಿಳೆಯ ಚಿಹ್ನೆಯ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೇ ಮತ ಹಾಕುವಂತೆ ಮನವಿ ಮಾಡಿದರು.
ತಾಲೂಕು ವೀರಶೈವ-ಲಿಂಗಾಯಿತ ಮಹಾಸಭಾದ ಅಧ್ಯಕ್ಷ ವಿ.ಎಸ್.ಧನಂಜಯ ಮಾತನಾಡಿ ವೀರಶೈವ ಸಮಾಜವನ್ನು ಜಾತಿ ಒಳಜಾತಿಗಳ ಹೆಸರಿನಲ್ಲಿ ವಿಭಜಿಸಲು ಹೊರಟಿದ್ದವರು ಮುಖ್ಯಮಂತ್ರಿ ಸಿದ್ದರಾಮಯ್ಯ. ವೀರಶೈವ ಸಮಾಜವನ್ನು ದುರ್ಭಲಗೊಳಿಸಲು ಹೊರಟಿದ್ದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಸಮುದಾಯದ ಜನ ತಕ್ಕ ಉತ್ತರ ನೀಡಬೇಕೆಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗರಾಜು, ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್, ಮನ್ ಮುಲ್ ನಿರ್ದೇಶಕ ಡಾಲು ರವಿ, ಜಿ.ಪಂ ಮಾಜಿ ಉಪಾಧ್ಯಕ್ಷ ಬ್ಯಾಲದಕೆರೆ ಪಾಪೇಗೌಡ, ರಾಜ್ಯ ಸಹಕಾರ ಮಾರಟ ಮಹಾ ಮಂಡಲಿಯ ನಿರ್ದೇಶಕ ಎಸ್.ಎಲ್.ಮೋಹನ್, ವೀರಶೈವ ಸಮಾಜದ ಮುಖಂಡರಾದ ತೋಂಟಪ್ಪಶೆಟ್ಟಿ, ಮೆಳ್ಳಳ್ಳಿ ಗಂಗಾಧರ್, ವೀರಶೈವ ಮಹಾಸಭಾದ ತಾಲೂಕು ಕಾರ್ಯದರ್ಶಿ ಈರಪ್ಪ ಸೇರಿದಂತೆ ಹಲವರು ಮಾತನಾಡಿ ಹೆಚ್.ಡಿ.ಕೆ ಪರ ಮತಯಾಚಿಸಿದರು.