ವೀರಶೈವ ಸಮಾಜದ ಜನಪ್ರತಿನಿಧಿಗಳಿಗೆ ಅಭಿನಂದನೆ

ತಿ.ನರಸೀಪುರ.ಏ.05: ವೀರಶೈವ ಲಿಂಗಾಯಿತ ಸಮುದಾಯದ ಕೆಲವರು ರಾಜಕೀಯ ಅಧಿಕಾರದ ಆಸೆಗಾಗಿ ತಮ್ಮ ಸ್ವಾಭಿಮಾನ ಮರೆತು ಬೇರೆಯವರನ್ನು ಓಲೈಸುವ ಕೀಳು ಮಟ್ಟಕ್ಕೆ ಇಳಿದಿರುವುದು ವಿಷಾಧನೀಯ ಎಂದು ವಿದ್ಯೋದಯ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ವಿದ್ಯೋದಯ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ವೀರಶೈವ-ಲಿಂಗಾಯಿತ ಹಿತರಕ್ಷಣಾ ವೇದಿಕೆಯ ಮೈಸೂರು ವಿಭಾಗ ಹಾಗು ತಿ.ನರಸೀಪುರ ತಾಲೂಕು ಘಟಕದ ವತಿಯಿಂದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಾಗು ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವೀರಶೈವ-ಲಿಂಗಾಯಿತ ಸಮುದಾಯಕ್ಕೆ ತನ್ನದೇ ಆದ ಗೌರವ,ಘನತೆ ಹಾಗು ಸಾಮಾಜಿಕ ಮನ್ನಣೆ ಇದೆ.ಇತ್ತೀಚಿನ ದಿನಗಳಲ್ಲಿ ಸಮಾಜದ ಕೃಪೆಯಿಂದಲೇ ಅಧಿಕಾರ ಗಳಿಸಿರುವವರೇ ಸಮಾಜದ ತುಳಿತಕ್ಕೆ ಮುಂದಾಗುತ್ತಿದ್ದು ಇಂತಹ ಬೆಳವಣಿಗೆ ಸಮಾಜದ ಏಳಿಗೆಗೆ ಮಾರಕವಾಗಿ ಪರಿಣಮಿಸಲಿದೆ ಎಂದರು.
ನಮ್ಮ ಸಮಾಜ ಶ್ರೇಷ್ಠ ಸಮಾಜವಾಗಿದೆ.ಇತ್ತೀಚಿನ ದಿನಗಳಲ್ಲಿ ಪಂಚಮಶಾಲಿ,ಲಿಂಗಾಯಿತ ಗೌಡ ಎಂಬ ಕೂಗು ಏಳ ತೊಡಗಿದೆ.ಉಪ ಪಂಗಡಗಳು ಕಿತ್ತಾಡುತ್ತಾ ಹೋದರೆ ಸಮಾಜದ ಸ್ಥಿತಿ ಗತಿ ಏನಾಗಲಿದೆ ಎಂಬುದನ್ನು ನಾವೆಲ್ಲರು ಯೋಚಿಸಬೇಕಿದೆ.ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಂಡಾಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಮುಂದುವರೆಯಲು ಸಾಧ್ಯ.ಉಪ ಪಂಗಡಗಳಲ್ಲಿ ಇರುವ ಭಿನ್ನಮತವನ್ನು ಮರೆತು ರಾಜಕೀಯ ಸ್ಥಾನಮಾನ ಪಡೆಯಬೇಕಿದೆ.ರಾಜಕೀಯ ಸ್ಥಾನ ಮಾನ ಇದ್ದಲ್ಲಿ ಮಾತ್ರ ಸಮಾಜ ಶೈಕ್ಷಣಿಕ, ಸಾಮಾಜಿಕವಾಗಿ ಹಾಗು ಔದ್ಯೋಗಿಕವಾಗಿ ಮುಂದುವರೆಯಲು ಸಾಧ್ಯವಾ ಗುತ್ತದೆ ಎಂದು ತಿಳಿಸಿದರು.