ವೀರಶೈವ ಲಿಂಗಾಯತ ಸಮುದಾಯ ಒಬಿಸಿ ಪಟ್ಟಿಗೆ ಸೇರಿಸಲು ಆಗ್ರಹಆ.1ರಂದು ಮುಖ್ಯಮಂತ್ರಿಗೆ ಮನವಿ ಪತ್ರ: ಮೋದಿ

ಕಲಬುರಗಿಜು 28: ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ (38) ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಇದೇ ಆಗಸ್ಟ್ 1ರಂದು ಬೆಳಗ್ಗೆ 11ಕ್ಕೆ ಕಲಬುರಗಿಯಲ್ಲಿ ಹೋರಾಟ ಕೈಗೊಂಡು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣು ಮೋದಿ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಅಧಿಕೃತ ಲಭ್ಯ ಮಾಹಿತಿಯ ಪ್ರಕಾರ, ಒಂದನೇ ಹಿಂದುಳಿದ ವರ್ಗಗಳ ಚಿನ್ನಪ್ಪರಡ್ಡಿ ಆಯೋಗವು ವೀರಶೈವ ಲಿಂಗಾಯತ ಸಮುದಾಯ ಸಾಕಷ್ಟು ಹಿಂದುಳಿದಿದ್ದರೂ ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈ ಬಿಟ್ಟಿದೆ. ಇದರಿಂದಾಗಿ ಸಮುದಾಯದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ ಎಂದು ಮೋದಿ ಬೇಸರ ವ್ಯಕ್ತಪಡಿಸಿದರು.
ಇಂತಹ ಇಬ್ಬಗೆಯ ನೀತಿಯಿಂದಾಗಿ ವೀರಶೈವ ಲಿಂಗಾಯತ ಸಮುದಾಯದ ಪ್ರತಿಭಾನ್ವಿತರು ಕೇಂದ್ರ ಸರಕಾರ ನಡೆಸುವ ಅಖಿಲ ಭಾರತ ಸೇವೆಗಳಲ್ಲಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಉದ್ಯೋಗ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಇದರ ಜೊತೆಗೆ, ಕೇಂದ್ರ ಸ್ವಾಮ್ಯದ ಪ್ರತಿಷ್ಢಿತ ಶೈಕ್ಷಣಿಕ ಸಂಸ್ಥೆಗಳಾದ ಐಐಟಿ, ಐಐಎಂ, ಎನ್.ಐ.ಟಿ, ನೀಟ್ ಮತ್ತು ಏಮ್ಸ್, ಕೇಂದ್ರೀಯ ವಿಶ್ವವಿದ್ಯಾಲಯ, ನವೋದಯ ಶಾಲಾ-ಕಾಲೇಜುಗಳಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಅಗತ್ಯ ಅವಕಾಶ ಲಭಿಸುತ್ತಿಲ್ಲ. ಹೀಗಾಗಿ, ಈ ನಿಟ್ಟಿನಲ್ಲಿ ಹೋರಾಟ ರೂಪಿಸಲಾಗುತ್ತಿದೆ ಎಂದು ವಿವರಿಸಿದರು.
ಮಹಾಸಭಾ ಗೌರವಾಧ್ಯಕ್ಷೆ ಶೀಲಾ ಮುತ್ತಿನ್, ಸೋಮಶೇಖರ್ ಹಿರೇಮಠ, ವೈಜನಾಥ ತಡಕಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.