ವೀರಶೈವ ಲಿಂಗಾಯತ ಸಮುದಾಯವನ್ನುಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಮನವಿ

ಕಲಬುರಗಿ ಆ 1: ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಸರಕಾರದ ಇತರೆ ಹಿಂದುಳಿದ ವರ್ಗಗಳ (ಓಬಿಸಿ) ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಕೋರಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಘಟಕದಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಇಂದು ಮನವಿಪತ್ರ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ ಕಳೆದ 60 ವರ್ಷಗಳಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಇತರೆ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದ್ದರೂ,ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗದಿರುವದರಿಂದ ಕೇಂದ್ರದ ಅನೇಕ ಸೌಲಭ್ಯಗಳಿಂದ ಸಮಾಜ ವಂಚಿತವಾಗಿದೆ.ಎಲ್ಲ ರಾಜ್ಯಗಳಲ್ಲಿ ವೀರಶೈವ ಲಿಂಗಾಯತರು ಇತರೇ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.ಆರ್ಥಿಕ,ಸಾಮಾಜಿಕ,ಶೈಕ್ಷಣಿಕವಾಗಿ ಹಿಂದುಳಿದ 16 ಉಪಪಂಗಡಗಳು ಮಾತ್ರ ಕೇಂದ್ರದ ಓಬಿಸಿ ಪಟ್ಟಿಯಲ್ಲಿದ್ದು ಎಲ್ಲ ಉಪಪಂಗಡಗಳನ್ನು ಈ ಪಟ್ಟಿಗೆ ಸೇರಿಸುವದು ನ್ಯಾಯೋಚಿತವಾಗಿದೆ.ಇದರಿಂದ ಇಡೀ ಸಮುದಾಯದ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ಮನವಿ ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಘಟಕದ ಅಧ್ಯಕ್ಷ ಶರಣಕುಮಾರ ಮೋದಿ,ಶಾಸಕ ಎಂ ವೈ ಪಾಟೀಲ, ಅಲ್ಲಮಪ್ರಭು ಪಾಟೀಲ, ನೀಲಕಂಠರಾವ ಮೂಲಗೆ,ಅಮರನಾಥ ಪಾಟೀಲ,ಚಂದು ಪಾಟೀಲ, ದೊಡ್ಡಪ್ಪಗೌಡ ಪಾಟೀಲ ನರಿಬೋಳ ,ರಾಜು ಲೆಂಗಟಿ,ಡಾ.ಸುಧಾ ಹಾಲಕಾಯಿ,ಎಂ ಎಸ್ ಪಾಟೀಲ ನರಿಬೋಳ, ಶೀಲಾ ಮುತ್ತಿನ್, ಸೋಮಶೇಖರ್ ಹಿರೇಮಠ, ವೈಜನಾಥ ತಡಕಲ್ ಸೇರಿದಂತೆ ಅನೇಕ ಮುಖಂಡರು, ಮಹಾಸಭಾದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ವಾಗ್ವಾದ:
ವೀರಶೈವ ಲಿಂಗಾಯತರನ್ನು ಓಬಿಸಿ ಪಟ್ಟಿಗೆ ಸೇರಿಸಲು ಆರ್‍ಎಸ್‍ಎಸ್ ವಿರೋಧವಿದೆ ಎಂದು ಆರೋಪಿಸಿ ಮನವಿ ಪತ್ರ ಸಲ್ಲಿಸಲು ಬಂದವರಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಆರ್‍ಎಸ್‍ಎಸ್‍ಗೆ ಧಿಕ್ಕಾರ ಕೂಗಿದರು. ಇದನ್ನು ಬಿಜೆಪಿ ಮುಖಂಡರು ಆಕ್ಷೇಪಿಸಿದರು.ಅಲ್ಲಿದ್ದ ಬಿಜೆಪಿ ಮುಖಂಡರಾದ ಅಮರನಾಥ ಪಾಟೀಲ,ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮೊದಲಾದರೊಂದಿಗೆ ವಾಗ್ವಾದ ನಡೆಯಿತು.ನಂತರ ಮುಖಂಡರ ಸಮಜಾಯಿಷಿಯಿಂದ ಪರಿಸ್ಥಿತಿ ತಿಳಿಗೊಂಡಿತು.