ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ನಗರಸಭೆ ಅಧ್ಯಕ್ಷೆ ಆಶಾರವರಿಗೆ ಸನ್ಮಾನ

ಚಾಮರಾಜನಗರ, ನ.10- ಚಾಮರಾಜನಗರ ನಗರಸಭೆ ನೂತನ ಅಧ್ಯಕ್ಷರಾದ ಸಿ.ಎಂ. ಆಶಾ ನಟರಾಜು ಅವರನ್ನು ವೀರಶೈವ ಲಿಂಗಾಯತ ಯುವ ವೇದಿಕೆ ಪದಾಧಿಕಾರಿಗಳು ಇಂದು ಭೇಟಿ ಮಾಡಿ ಅಭಿನಂದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಗುರುಮಲ್ಲಪ್ಪ ಹಾಗೂ ಪದಾಧಿಕಾರಿಗಳು ಸಾಮಾಜಿಕ ನ್ಯಾಯದಡಿ ಎಲ್ಲಾ ಸದಸ್ಯರು ಹಾಗೂ ವಾರ್ಡ್ ಗಳ ನಾಗರಿಕರ ಸಹಕಾರದಿಂದ ಪಟ್ಟಣವನ್ನು ಅಭಿವೃದ್ಧಿ ಪಡಿಸುವಂತೆ ಆಶಿಸಿದರು.
ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆಯ ಪದಾಧಿಕಾರಿಗಳು ವಿವಿಧ ಬೇಡಿಕೆ ಈಡೇರಿಕೆಗೆ ಅಧ್ಯಕ್ಷರಲ್ಲಿ ಮನವಿ ಸಲ್ಲಿಸಿದರು. ನಗರದ ಶ್ರೀ ಬಸವೇಶ್ವರ ನಗರದ ಪ್ರವೇಶ ದ್ವಾರದಲ್ಲಿ ಶ್ರೀ ಬಸವೇಶ್ವರರ ಕಮಾನು ನಿರ್ಮಾಣ ಮಾಡಬೇಕು,ಮತ್ತು ಕರಿನಂಜನಪುರ ರಸ್ತೆಗೆ ಮಾಜಿ ಶಾಸಕರಾದ ದಿ. ಸಿ.ಗುರುಸ್ವಾಮಿ ಅವರ ಹೆಸರಿಡಬೇಕು ಹಾಗೂ 26 ನೇ ವಾರ್ಡಿನ ಶ್ರೀ ಬಸವೇಶ್ವರ ಸಾರ್ವಜನಿಕ ಉದ್ಯಾನವನವನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷೆ ಆಶಾ ನಟರಾಜು ಅವರು, ಪಟ್ಟಣದ ಜನರ ಸಹಕಾರದಿಂದ ಬಿಜೆಪಿ ಪಕ್ಷದ ಮುಖಂಡರುಗಳು, ಸಂಸದರು, ನಗರಸಭಾ ಸದಸ್ಯರ ಬೆಂಬಲದಿಂದ ಅಧ್ಯಕ್ಷ ಪದವಿ ದೊರೆತಿದ್ದು ಸಾಮಾಜಿಕ ಬದ್ಧತೆಯಿಂದ ಎಲ್ಲಾ ವರ್ಗಗಳ ಹಿತಾಸಕ್ತಿ ರಕ್ಷಣೆಗೆ ಸಲಹೆ, ಸಹಕಾರ, ಮಾರ್ಗದರ್ಶನ ಪಡೆದು ಮುಂದಿನ ದಿನಗಳಲ್ಲಿ ಮನವಿಗಳ ಬಗ್ಗೆ ಚರ್ಚಿಸಿ ಸರ್ವಾನುಮತದಿಂದ ಈಡೇರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ಗುರುಮಲ್ಲಪ್ಪ, ಉಪಾಧ್ಯಕ್ಷ ಸಿ.ಡಿ.ಪ್ರಕಾಶ್, ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಡಾ.ಪರಮೇಶ್ವರಪ್ಪ, ವೇದಿಕೆಯ ಸಂಚಾಲಕರಾದ ರಘು, ಉಮೇಶ್ ರಾಜ್, ಸಂತೋμï, ಗಣೇಶ್ ಸೇರಿದಂತೆ ಇತರರು ಇದ್ದರು.
ಖಂಡನೆ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಕಿಡಿಗೇಡಿಗಳು ವಿಶ್ವ ಗುರು ಬಸವಣ್ಣ ಅವರ ಮೂರ್ತಿಯನ್ನು ವಿರೂಪಗೊಳಿಸಿರುವ ಘಟನೆ ತೀವ್ರ ಖಂಡನೀಯವಾಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಪತ್ತೆ ಮಾಡಿ ತಕ್ಕ ಶಿಕ್ಷೆ ನೀಡಬೇಕು ಎಂದು ವೇದಿಕೆಯ ಅಧ್ಯಕ್ಷ ಗುರುಮಲ್ಲಪ್ಪ ಹಾಗೂ ಪದಾಧಿಕಾರಿಗಳು ಒತ್ತಾಯಿಸಿದರು.