ವೀರಶೈವ ಲಿಂಗಾಯತ ಮುಖಂಡರ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್: ತನಿಖೆಗೆ ಮೋದಿ ಆಗ್ರಹ

ಕಲಬುರಗಿ,ಫೆ.23-ಜಿಲ್ಲೆಯಲ್ಲಿ, ಅದರಲ್ಲೂ ವಿಶೇಷವಾಗಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಮುಖಂಡರ ಮೇಲೆ ಸುಳ್ಳು ಅಟ್ರಾಸಿಟಿ/ದಲಿತ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಡಾ.ಶರಣಕುಮಾರ ಮೋದಿ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು, ವೀರಶೈವ ಲಿಂಗಾಯತ ಸಮಾಜದ ಮುಖಂಡರ ಮೇಲೆ ವಿನಾಕಾರಣ ಸುಳ್ಳು ಪ್ರಕರಣಗಳು ದಾಖಲಾಗುತ್ತಿರುವುದು ಮಹಾಸಭಾದ ಗಮನಕ್ಕೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಮತಕ್ಷೇತ್ರದಲ್ಲಿ 17 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 10 ಪ್ರಕರಣಗಳು ಲಿಂಗಾಯತ ಮುಖಂಡರ ಮೇಲೆಯೇ ದಾಖಲಾಗಿವೆ. ಕ್ಷುಲ್ಲಕ ಕಾರಣಕ್ಕಾಗಿ ಮತ್ತು ದ್ವೇಷ ಸಾಧಿಸಲು ಸುಳ್ಳು ಕೇಸ್ ದಾಖಲಿಸಲಾಗುತ್ತಿದೆ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಪೊಲೀಸ್ ಇಲಾಖೆ ಈ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಲಬುರಗಿ ತಾಲ್ಲೂಕಿನ ಸಣ್ಣೂರ ಗ್ರಾಮದ ವೀರಶೈವ ಸಮಾಜದ ಮುಖಂಡರೊಬ್ಬರ ಮೇಲೆ 4 ತಿಂಗಳಲ್ಲಿ 3 ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಲಾಗಿದೆ. ವಿನಾಕಾರಣ ಸಮಾಜದ ಮುಖಂಡರ ಮೇಲೆ ಪ್ರಕರಣ ದಾಖಲಿಸುತ್ತಿರುವುದು ಕಂಡು ಬಂದಿದೆ. ಆದ್ದರಿಂದ ಸುಳ್ಳು ಪ್ರಕರಣಗಳನ್ನು ಇಲಾಖೆ ಪ್ರಥಮ ಹಂತದಲ್ಲಿಯೇ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಇದರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.