ವೀರಶೈವ ಲಿಂಗಾಯತ ಮಠಗಳು ಇತರೆ ಸಮುದಾಯಗಳಿಗೆ ಮಾದರಿ

ತುಮಕೂರು, ಆ. ೮- ಕಾಯಕ,ದಾಸೋಹ ಎಂಬ ವೀರಶೈವ ಲಿಂಗಾಯತ ಸಮಾಜದ ಧ್ಯೇಯ ಪ್ರಸ್ತುತ ದೇಶದಲ್ಲಿಯೇ ಉನ್ನತ ಸ್ಥಾನ ಪಡೆದಿದೆ. ಒಂದು ಸರ್ಕಾರ ಮಾಡುವ ಕೆಲಸವನ್ನು ಮಠ, ಮಾನ್ಯಗಳು ಮಾಡಿ ಇತರೆ ಸಮುದಾಯಗಳಿಗೆ ಮಾದರಿಯಾಗಿವೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.
ನಗರದ ಎಸ್‌ಐಟಿ.ಬಿರ್ಲಾ ಆಡಿಟೋರಿಯಂನಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ೮ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗು ನೂತನ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
೧೯೬೦ರ ದಶಕದಲ್ಲಿಯೇ ಮಠ,ಮಾನ್ಯಗಳ ಮೂಲಕ ವೀರಶೈವ ಲಿಂಗಾಯತ ಸಮುದಾಯಕ್ಕೆ ಶಿಕ್ಷಣ ದೊರೆತ ಕಾರಣ.ಇಂದು ರಾಜಕೀಯವಾಗಿ, ಸರ್ಕಾರಿ ಉದ್ಯೋಗಗಳಲ್ಲಿ, ವೈದ್ಯಕೀಯ ಕ್ಷೇತ್ರಗಳಲ್ಲಿ ಈ ಸಮುದಾಯದ ವ್ಯಕ್ತಿಗಳನ್ನು ಹೆಚ್ಚಿನದಾಗಿ ಕಾಣಲು ಸಾಧ್ಯವಾಗಿದೆ. ನಡೆದಾಡುವ ದೇವರು ಎಂದು ಭಕ್ತರಿಂದ ಕರೆಸಿಕೊಂಡ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ ದೂರದೃಷ್ಟಿಯ ಫಲವಾಗಿ ಲಕ್ಷಾಂತರ ಜನರು ಶಿಕ್ಷಣವಂತರಾಗಿ, ತಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದರು.
ಸರ್ವ ಜನಾಂಗದ ತ್ರಿವಿಧ ದಾಸೋಹ ಕೇಂದ್ರವಾಗಿರುವ ಸಿದ್ದಗಂಗೆಗೆ ಸರ್ಕಾರ ಬಿಸಿಯೂಟ ಆರಂಭಿಸಿದ ವರ್ಷಗಳಲ್ಲಿ ಪ್ರವೇಶ ಸಂಖ್ಯೆ ಕೊಂಚ ಇಳಿಮುಖವಾಗಿತ್ತು. ಆದರೆ ಕೋವಿಡ್ ನಂತರದ ವರ್ಷಗಳಲ್ಲಿ ಮಕ್ಕಳ ಸಂಖ್ಯೆ ೧೩ ಸಾವಿರ ದಾಟಿದೆ. ಮಕ್ಕಳಿಗೆ ಊಟದ ಕೊರತೆ ಇಲ್ಲ. ಆದರೆ ಅವರಿಗೆ ಮಲಗಲು ಜಾಗ ಸಾಕಾಗುತ್ತಿಲ್ಲ ಎಂಬ ಅಳಲನ್ನು ಸ್ವಾಮೀಜಿವರು ತೋಡಿಕೊಂಡಿದ್ದಾರೆ. ಸ್ವಾಮೀಜಿಯವರ ನಿಸ್ವಾರ್ಥ ಸೇವೆ, ಸಿದ್ದಗಂಗಾ ಮಠವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ ಎಂದು ಹೇಳಿದರು.
ಲಿಂಗಾಯತ ವೀರಶೈವರು ಇಂದು ಜಗತ್ತಿನಲ್ಲಿ ಗುರುತಿಸಿಕೊಂಡಿದ್ದರೆ, ಅದು ವಿದ್ಯೆಯಿಂದ ಮಾತ್ರ. ಹಾಗಾಗಿ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ. ಎಸ್‌ಎಸ್‌ಎಲ್‌ಸಿಯವರಗೆ ಒಂದು ರೀತಿ, ಆದರೆ ಪಿಯುಸಿಯಲ್ಲಿ ವಿದ್ಯಾರ್ಥಿಗಳು ವಿಷಯವನ್ನು ಎಷ್ಟು ಗ್ರಹಿಸುತ್ತಾರೆ ಅನ್ನುವುದರ ಮೇಲೆ ಅವರ ಯಶಸ್ಸು ಅಡಗಿರುತ್ತದೆ. ವಿದ್ಯಾರ್ಥಿಗಳು ಮೊದಲು ಜಗತ್ತಿನಲ್ಲಿ ಯಾವ ವಿಷಯಗಳಿಗೆ ಹೆಚ್ಚು ಬೆಲೆಯಿದೆ. ಯಾವ ವಿಷಯ ಓದಿದರೆ ಉತ್ತಮ ಕೆಲಸ ದೊರೆಯುತ್ತದೆ ಎಂಬುದನ್ನು ತಿಳಿದುಕೊಂಡು, ಆ ಕಡೆಗೆ ನಡೆಯಬೇಕು. ಮಕ್ಕಿಕ್ಕಮಕ್ಕಿ ಓದುವುದರಿಂದ ನಿಮ್ಮ ಡಿಗ್ರಿಗಳಿಗೆ ಯಾವುದೇ ಪ್ರಯೋಜನವಿಲ್ಲ. ಕೌಶಲ್ಯ ಜತೆಗೆ ಅಂಕಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ತಿಪಟೂರು ಶಾಸಕ ಕೆ.ಷಡಕ್ಷರಿ ಮಾತನಾಡಿ, ಹಿತ್ತಲ ಗಿಡ ಮದ್ದಲ್ಲ ಎಂಬಂತೆ, ನಮ್ಮನ್ನು ನಾವು ನಿರ್ಲಕ್ಷಿಸುವುದು ಸರಿಯಲ್ಲ. ಸಮಾಜದ ಚುನಾಯಿತ ಪ್ರತಿನಿಧಿಯಿಂದ ಆ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಗೌರವಿಸುವುದನ್ನು ಕಲಿಯಬೇಕು. ತಾತ್ಸಾರ ಒಳ್ಳೆಯದಲ್ಲ. ಚುನಾವಣೆ ಸಂದರ್ಭದಲ್ಲಿ ಕೆಲವು ಮಾರ್ಪಾಡು ಮಾಡಿಕೊಳ್ಳುವುದು ಸಹಜ. ಆನಂತರ ನಾವು ಸಮಾಜಕ್ಕೆ ದುಡಿಯೋಣ. ಹಾಗೆಯೇ ಸಮಾಜವು ನಮ್ಮ ಜತೆಗೆ ಬರಬೇಕು. ತಿಪಟೂರು ಕ್ಷೇತ್ರದಿಂದ ಮೂರನೇ ಬಾರಿ ಶಾಸಕನಾಗಿ ಆಯ್ಕೆಯಾಗಿರುವ ವ್ಯಕ್ತಿ ನಾನೊಬ್ಬನೇ. ಇದರದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಕೊಡುಗೆ ಹೆಚ್ಚಿದೆ ಎಂದರು.
ಮಕ್ಕಳ ಸಾಧನೆಯ ಹಿಂದೆ ಅವರ ತಂದೆ- ತಾಯಿಗಳು, ಗುರು-ಹಿರಿಯರ ಮಾರ್ಗದರ್ಶನದ ಜತೆಗೆ, ವಿದ್ಯಾರ್ಥಿಗಳ ಆಸಕ್ತಿಯೂ ಮುಖ್ಯವಾಗಿರುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಮಠ-ಮಾನ್ಯಗಳು ಪ್ರವೇಶ ಮಾಡದಿದ್ದರೆ,ಎಷ್ಟೋ ಜನ ಅವಿದ್ಯಾವಂತರಾಗಿಯೇ ಉಳಿಯುತ್ತಿದ್ದರು. ಇದರಲ್ಲಿ ಸಿದ್ದಗಂಗಾ ಮಠದ ಪಾತ್ರವೂ ಬಹಳಷ್ಟಿದೆ. ಮೊದಲಿಗೆ ಅನ್ನದಾಸೋಹ ಆರಂಭಿಸಿ ದವರು ಸಿದ್ದಗಂಗಾ ಶ್ರೀಗಳು. ಇದನ್ನು ನಾವ್ಯಾರು ಮರೆಯುವಂತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ ಮಾತನಾಡಿ, ವಿದ್ಯೆ ಎಂಬುದು ಸಾಧಕನ ಸ್ವತ್ತು. ನಾವು ಎಷ್ಟು ಅದರ ಹತ್ತಿರ ಹೋಗುತ್ತೆವೆಯೋ ಆದು ಅಷ್ಟೇ ನಮ್ಮ ಹತ್ತಿರಕ್ಕೆ ಬರುತ್ತದೆ. ಯಾವುದು ಕಲಿಯಲು ಅಸಾಧ್ಯವಾದ ವಿಷಯವಿಲ್ಲ. ಹಾಗಾಗಿಯೇ ಅಬ್ದುಲ್ ಕಲಾಂ ರಂತಹ ಹಿರಿಯರು ಆನೇಕ ವಿಷಯಗಳಲ್ಲಿ ಪಾರಂಗತರಾಗಿದ್ದರು. ನಿಮ್ಮೆಲ್ಲರ ಭವಿಷ್ಯ ನಿಮ್ಮ ಕೈಯಲಿದೆ. ನೀವು ಏನಾಗಬೇಕೆಂದು ನಿರ್ಧರಿಸಿದ್ದರೋ, ಆ ಕಡೆಗೆ ಹೆಚ್ಚು ಒತ್ತು ನೀಡಿ, ಖಂಡಿತ ಯಶಸ್ಸು ದೊರೆಯುತ್ತದೆ ಎಂದು ಶುಭ ಹಾರೈಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ವೀರಶೈವ ಲಿಂಗಾಯತ ಸೇವಾ ಸಮಿತಿ ಅಧ್ಯಕ್ಷ ದರ್ಶನ್‌ಕುಮಾರ್, ವೀರಶೈವ ಲಿಂಗಾಯತರನ್ನು ಒಂದೇ ವೇದಿಕೆಗೆ ತಂದು, ಕಾಯಕ ದಾಸೋಹದ ತತ್ವದಡಿಯಲ್ಲಿ ಯುವಜನರನ್ನು ಪ್ರೋತ್ಸಾಹಿಸುವ ಸಲುವಾಗಿ ಕಳೆದ ೮ ವರ್ಷಗಳ ಹಿಂದೆ ಈ ಸಮಿತಿಯನ್ನು ರಚಿಸಲಾಗಿದೆ. ಹಿರಿಯರ ಮಾರ್ಗದರ್ಶನದಲ್ಲಿ ಪ್ರತಿವರ್ಷ ಪ್ರತಿಭಾ ಪುರಸ್ಕಾರ ನಡೆಸುವ ಮೂಲಕ ಪ್ರತಿಭಾವಂತರನ್ನು ಪ್ರೋತ್ಸಾಹಿಸಿಕೊಂಡು ಬರಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಪ್ರತಿಭಾವಂತರ ಸಂಖ್ಯೆಯೂ ಹೆಚ್ಚುತ್ತಿದೆ. ಇದು ನಮಗೆ ಮತ್ತಷ್ಟು ಸಂತಸ ತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್ ವಹಿಸಿದ್ದರು. ಗುಬ್ಬಿಯ ದಿಲೀಪ್, ಸಿದ್ದಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಪರಮೇಶ್, ಮುಖಂಡರಾದ ಟಿ.ಆರ್.ಸದಾಶಿವಯ್ಯ, ಲಿಂಗದೇವರು, ರಾಮನಗರದ ರಮ್ಯ, ವಿಜಯಕುಮಾರ್, ಕೊಪ್ಪಲ್ ನಾಗರಾಜು, ಹೆಚ್.ಎಂ.ಟಿ.ರವೀಶ್, ಶಶಿಹುಲಿಕುಂಟೆ ಮಠ್, ಯಶಸ್ಸ್, ಜಿಲ್ಲಾ ವೀರಶೈವ ಲಿಂಗಾಯತ ಸೇವಾ ಸಮಿತಿಯ ಗೌರವಾಧ್ಯಕ್ಷ ವಿರೂಪಾಕ್ಷಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ರವೀಶ್, ನಿಕಟಪೂರ್ವ ಗೌರವಾಧ್ಯಕ್ಷ ತರಕಾರಿ ಮಹೇಶ್, ಬಿ.ಎನ್.ರುದ್ರೇಶ್, ಎಂ.ಎಸ್.ಗುರುಪ್ರಸಾದ್, ಆರ್.ಎಸ್.ಸೋಮಶೇಖರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.