ವೀರಶೈವ – ಲಿಂಗಾಯತ ನಿಗಮ ಸ್ಥಾಪನೆಗೆ ಬಿಎಸ್‌ವೈ ಆದೇಶ

ಬೆಂಗಳೂರು,ನ.೧೭- ರಾಜ್ಯದಲ್ಲಿ ವೀರಶೈವ – ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬ ಬಲವಾದ ಬೇಡಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ವೀರಶೈವ – ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶಿಸಿದ್ದಾರೆ.
ರಾಜ್ಯದಲ್ಲಿ ವೀರಶೈವ -ಲಿಂಗಾಯತ ಸಮಾಜದ ಜನಾಂಗದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದವರಿದ್ದಾರೆ.
ಈ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ವೀರಶೈವ – ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಅಗತ್ಯವಿರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಈ ನಿಗಮ ಸ್ಥಾಪನೆ ಮಾಡಲು ಅವರು ಆದೇಶಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರು ಟಿ.ಎಂ ವಿಜಯಭಾಸ್ಕರ್ ಅವರಿಗೆ ಟಿಪ್ಪಣಿ ಕಳುಹಿಸಿ ವೀರಶೈವ -ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.
ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಆದೇಶವಾಗುತ್ತಿದ್ದಂತೆಯೇ ಲಿಂಗಾಯತ ವೀರಶೈವ ನಿಗಮ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ವೀರಶೈವ ಲಿಂಗಾಯತ ಸಮುದಾಯದ ಸಚಿವರುಗಳು, ಶಾಸಕರು, ಮುಖಂಡರುಗಳು ಹಾಗೂ ವೀರಶೈವ ಲಿಂಗಾಯತ ಸಂಘಟನೆಗಳು ಮನವಿ ಮಾಡಿದ್ದವು.
ವೀರಶೈವ ಲಿಂಗಾಯತ ಸಂಘಟನೆಗಳು ಶೀಘ್ರ ನಿಗಮ ಸ್ಥಾಪಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದರು. ಈ ಎಲ್ಲ ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿಗಳು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸಿದ್ದಾರೆ.
ಸ್ವಾಗತ
ರಾಜ್ಯದಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ತೀರ್ಮಾನ ಕೈಗೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘಟನೆ ಸೇರಿದಂತೆ ವಿವಿಧ ವೀರಶೈವ ಸಂಘಟನೆಗಳು ಅಭಿನಂದನೆ ಸಲ್ಲಿಸಿ ಮುಖ್ಯಮಂತ್ರಿಗಳ ತೀರ್ಮಾನವನ್ನು ಸ್ವಾಗತಿಸಿವೆ.