ವೀರಶೈವ ಲಿಂಗಾಯತ ಜಂಗಮರಿಗೆ ಎಸ್‍ಸಿ ಪ್ರಮಾಣಪತ್ರ ನೀಡುವುದನ್ನು ವಿರೋಧಿಸಿ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಕುರುಗೋಡು.ಸೆ.8 ವೀರಶೈವ ಲಿಂಗಾಯತ ಜಂಗಮರಿಗೆ ಎಸ್‍ಸಿ ಪ್ರಮಾಣಪತ್ರ ನೀಡುವುದನ್ನು ವಿರೋದಿಸಿ, ಕುರುಗೋಡು ತಾಲೂಕುಮಟ್ಟದ ಪರಿಶಿಷ್ಟಜಾತಿ ಎಸ್‍ಸಿ ಒಕ್ಕೂಟದಿಂದ ಸಾವಿರಾರು ಸಂಖ್ಯೆಯ ದಲಿತರು ಬೃಹತ್ ಪ್ರತಿಭಟನೆ ಮಾಡಿದರು. ಅಲೆಮಾರಿ ಬೇಡ/ಬುಡ್ಗ ಜಂಗಮ [ಎಸ್‍ಸಿ] ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಸಂಚಾಲಕ ವಿ.ರಾಮುಡುಎಡುವಲಿ ಮಾತನಾಡಿ, ಪ್ರಸ್ತುತವಾಗಿ ಪರಿಶಿಷ್ಟರಲ್ಲದ ವೀರಶೈವ ಲಿಂಗಾಯತ ಜಂಗಮರು ಎಸ್‍ಸಿ ಪ್ರಮಾಣ ಪತ್ರವನ್ನು ಪಡೆಯಲು ಹೊರಟಿದ್ದಾರೆ. ಸರ್ಕಾರ ಅವರಿಗೆ ಯಾವುದೇ ಕಾರಣಕ್ಕೂ ಎಸ್‍ಸಿ ಸರ್ಟಿಪಿಕೇಟ್ ಕೊಡಬಾರದು ಎಂದು ಆಗ್ರಹಿಸಿದರು. ಅಲೆಮಾರಿ ಬೇಡ/ ಬುಡ್ಗ ಜಂಗಮ ಬಳ್ಳಾರಿ ಜಿಲ್ಲಾದ್ಯಕ್ಷ ಗಂಗಾಧರ್ ಮಾತನಾಡಿ, ಸಂವಿದಾನಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ರವರು ಸಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದ ಸಮುದಾಯಗಳನ್ನು 1950 ರಲ್ಲಿ ಪ.ಜಾ/ ಪ.ಪಂಗಡದಲ್ಲಿ ಮೀಸಲಾತಿಯನ್ನು ಕಲ್ಪಿಸಿದ್ದಾರೆ. ಅದರಲ್ಲಿ ಬೇಡಜಂಗಮ್/ ಬುಡ್ಗಜಂಗಮ ಸಮುದಾಯವು ಒಂದಾಗಿದೆ ಎಂದು ನುಡಿದರು. ಪರಿಶಿಷ್ಟ ಜಾತಿಯ ಬೇಡ ಬುಡ್ಗಜಂಗಮರು ಮಾಂಸಹಾರಿಗಳು, ಗುಡ್ಡಗಾಡಿನಲ್ಲಿ, ಗುಡಾರ-ಗುಡಿಸಲಿನಲ್ಲಿ ವಾಸಿಸುತ್ತಾ, ಒಂದುಕಡೆ ನಿಲ್ಲದೆ ನಿರಂತರವಾಗಿ ಊರೂರುತಿರುಗುತ್ತಾ ಅಲೆಮಾರಿಗಳಾಗಿ ಸಂಚಾರ ಮಾಡುತ್ತಾ, ಆದಿ-ಅನಾದಿಕಾಲದಿಂದಲೂ ವೇಶ,ಭೂಷಣಗಳನ್ನು ಹಾಕುತ್ತಾ, ಬುರ್ರಕಥಾ ಹೇಳಿ ಜೀವನಸಾಗಿಸುವ ನಾವುಗಳು ನಿಜವಾದ ಬೇಡ/ಬುಡ್ಗಜಂಗಮರು ಎಂದು ನುಡಿದರು. ಆದರೆ ಇಂದು ವೀರಶೈವ ಲಿಂಗಾಯತ ಜಂಗಮರು ನಮಗೆ ಎಸ್‍ಸಿ ಪ್ರಮಾಣಪತ್ರ ಕೊಡಬೇಕೆಂದು ಹೊರಟಿದ್ದಾರೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.? ವೀರಶೈವಲಿಂಗಾಯತ ಜಂಗಮರು ಸರ್ಕಾರಕ್ಕೆ ಸುಳ್ಳುಮಾಹಿತಿ ನೀಡಿ ಜಾತಿಪ್ರಮಾಣ ಪತ್ರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಈಗಾಗಲೇ ಸುಳ್ಳುಹೇಳಿ ಜಾತಿ ಪ್ರಮಾಣಪತ್ರಗಳನ್ನು ಪಡೆದವರನ್ನು ಬಂದಿಸಿ, ಕಾನೂನುಕ್ರಮ ಶಿಕ್ಷೆಗೆ ಒಳಪಡಿಸಬೇಕೆಂದು ನುಡಿದರು. ಒಂದುವೇಳೆ ಸರ್ಕಾರವು ಅವರ ಒತ್ತಡಕ್ಕೆ, ಮತ್ತು ಅಮಿಷಕ್ಕೆ ಒಳಗಾಗಿ ಎಸ್‍ಸಿ ಪ್ರಮಾಣಪತ್ರನೀಡಿದರೆ, ನಾಡಿನ ವಿವಿದ ದಲಿತಪರ ಮೀಸಲಾತಿ ಸಂಘಟನೆಗಳ ಮಹಾಒಕ್ಕೂಟವು ರಾಜ್ಯಾದಾದ್ಯಂತ ಉಗ್ರಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಹಶೀಲ್ದಾರರಿಗೆ ಮನವಿಸಲ್ಲಿಸಿದರು. ಮನವಿಸ್ವೀಕರಿಸಿದ ತಹಶೀಲ್ದಾರ್ ಕೆ.ರಾಘವೇಂದ್ರರಾವ್‍ರವರು ತಮ್ಮ ಬೇಡಿಕೆಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ದಲಿತ ಮುಖಂಡ ಎಂ.ರುದ್ರಪ್ಪ, ಟಿ.ಸಿದ್ದಪ್ಪ, ಬುಡ್ಗಜಂಗಮಶ್ರೀರಾಮುಲು, ವಿ.ಗುರಪ್ಪ, ಹಂಡಿಜೋಗಿಸುಂಕಪ್ಪ, ಕೊರಚಅಂಜಿನಪ್ಪ, ಬುಡ್ಗಜಂಗಮಸಂಪತ್, ಹೆಚ್.ಬಸವರಾಜ ಇತರರು ಮಾತನಾಡಿದರು. ಪ್ರಾರಂಭದಲ್ಲಿ ಶ್ರೀದೊಡ್ಡಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಪ್ರತಿಭಟನೆ ಪಟ್ಟಣದ ರಾಜಬೀದಿಗಳಲ್ಲಿ ಸಂಚರಿಸಿ, ತಹಶೀಲ್ದಾರ್ ಕಛೇರಿಯ ಮುಂದೆ ಪ್ರತಿಭಟನೆ ಮಾಡಿದರು. ಪ್ರತಿಭಟನೆಯಲ್ಲಿ ಕುರುಗೋಡು ತಾಲೂಕು ಮಟ್ಟದ ಪರಿಶಿಷ್ಟಜಾತಿ ಒಕ್ಕೂಟದ ಮಾದಿಗ, ಬೋವಿ, ಬೇಡಬುಡ್ಜಜಂಗಮ, ಚೆಲುವಾದಿ, ಕೊರವರು, ಹಂಡಿಜೋಗಿ, ಚೆನ್ನದಾಸರು, ತೋಟಿಯರು, ಲಮಾದಾಸರು, ಸಮಾಗಾರು, ಲಂಬಾಣಿ, ಹಾಗು ಇನ್ನುಳಿದ 101 ಪರಿಶಿಷ್ಟ ಜಾತಿ ಸಮುದಾಯಗಳ ಸಾವಿರಾರು ಸಂಖ್ಯೆಯ ದಲಿತರು ಇದ್ದರು.