ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ೫ ಸಾವಿರ ಕೋಟಿ ರೂ. ಅನುದಾನಕ್ಕೆ ಆಗ್ರಹ

ತುಮಕೂರು, ನ. ೧೯- ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಜನಸಂಖ್ಯೆಗೆ ಅನುಗುಣವಾಗಿ ೫ ಸಾವಿರ ಕೋಟಿ ರೂ. ಅನುದಾನವನ್ನು ನೀಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಒತ್ತಾಯಿಸಿದರು.
ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶವನ್ನು ಹೊರಡಿಸಿದ್ದಾರೆ. ಆದರೆ ಸಮಾಜ ಬಹುಮುಖ್ಯ ಬೇಡಿಕೆಯಾದ ಹಿಂದುಳಿದ ವರ್ಗಕ್ಕೆ ಸೇರಿಸಲು ಕ್ರಮ ವಹಿಸಬೇಕು ಎಂದರು.
ವೀರಶೈವ- ಲಿಂಗಾಯತ ಒಂದೇ ಆಗಿದ್ದು, ಕೆಲವರು ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ಮಾಡುವಂತೆ ಒತ್ತಾಯಿಸುತ್ತಿರುವುದು ಸರಿಯಲ್ಲ. ಸಮಾನತೆ ನೀಡುವ ದೃಷ್ಠಿಯಿಂದ ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ರಾಜ್ಯದಲ್ಲಿ ಒಂದೂವರೆ ಕೋಟಿ ವೀರಶೈವ ಲಿಂಗಾಯತ ಸಮುದಾಯವಿದ್ದು, ಮಡಿವಾಳ, ಕುಂಬಾರ, ಕಮ್ಮಾರ, ಕ್ಷೌರಿಕ ಸೇರಿದಂತೆ ನೂರಾರು ಜಾತಿಗಳಿದ್ದು ಎಲ್ಲ ಜಾತಿಗಳಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಅಗತ್ಯ ಅನುದಾನ ನೀಡಬೇಕೆಂದು ಆಗ್ರಹಿಸಿದರು.
ನಗರ ವೀರಶೈವ ಸೇವಾ ಸಮಿತಿ ಟಿ.ಬಿ.ಶೇಖರ್ ಮಾತನಾಡಿ, ಸಮಾಜದ ಬೇಡಿಕೆಗಳಲ್ಲಿ ಒಂದಾದ ನಿಗಮವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಥಾಪಿಸಿರುವುದು ಸಂತಸದ ವಿಷಯವಾಗಿದೆ. ಅದರಂತೆ ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಮಾಜದಲ್ಲಿ ಹಿಂದುಳಿದಿರುವ ಕುಟುಂಬಗಳಿಗೆ ನೆರವಾಗುವಂತೆ ಮನವಿ ಮಾಡಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮೋಹನ್‌ಕುಮಾರ್ ಪಟೇಲ್ ಮಾತನಾಡಿ, ವೀರಶೈವ- ಲಿಂಗಾಯತ ಸಮುದಾಯದಲ್ಲಿ ಇಂದಿಗೂ ಅನೇಕ ಕುಟುಂಬಗಳು ಬಡತನ ರೇಖೆಯ ಕೆಳಗೆ ಬದುಕುತ್ತಿದ್ದು, ಸರ್ಕಾರ ಸ್ಥಾಪಿಸಿರುವ ನಿಗಮದಿಂದ ಅನುಕೂಲವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಮಹಾಸಭಾ ಉಪಾಧ್ಯಕ್ಷ ಎಸ್.ಡಿ.ಚಂದ್ರಮೌಳಿ, ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಿವಕುಮಾರ್, ಜಯಣ್ಣ, ರಮೇಶ್, ನಟರಾಜು, ಸುಮಾ ಪ್ರಸನ್ನ, ಶಿವಲಿಂಗಮ್ಮ, ರುದ್ರಪ್ರಸಾದ್, ಚಂದ್ರಶೇಖರ್, ಶೇಖರ್, ಜಿ.ಎಸ್.ಮಂಜುನಾಥ್, ದಿನೇಶ್, ಮಲ್ಲೇಶಯ್ಯ, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.