ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ: ವಿಜಯೋತ್ಸವ

ಕಲಬುರಗಿ,ನ.17: ರಾಜ್ಯ ಸರ್ಕಾರವು ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಆದೇಶ ಹೊರಡಿಸಿದ್ದರಿಂದ ವಿವಿಧ ಸಂಘಟನೆಗಳ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಈ ಕುರಿತು ಅನೇಕ ಗಣ್ಯರು ಸರ್ಕಾರದ ಕ್ರಮವನ್ನು ಸ್ವಾಗತಿಸಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದಿಸಿದ್ದಾರೆ.
ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಪ್ರಶಾಂತ್ ಕಲ್ಲೂರ್ ಅವರ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆಯ ಕಾರ್ಯರ್ತರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಸಮುದಾಯದ ಪರ ಜಯಘೋಷ ಹಾಕಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕಲ್ಲೂರ್ ಅವರು ಮಾತನಾಡಿ, ನೂರಾರು ಮಠಾಧೀಶರು ಸಾವಿರಾರು ಸಮುದಾಯದ ಬಂಧುಗಳ ಉಪಸ್ಥಿತಿಯಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ಮಾಡಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮತ್ತು ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅದೇ ರೀತಿಯಾಗಿ ರಾಜ್ಯ ಸರ್ಕಾರ ಈಗ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿ ರಚನೆ ಮಾಡಿ ಆದೇಶ ಹೊರಡಿಸಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಸಂಭ್ರಮಾಚರಣೆಯಲ್ಲಿ ಜಿಲ್ಲಾಧ್ಯಕ್ಷ ದಯಾನಂದ್ ಪಾಟೀಲ್, ರಾಜ್ಯ ಸಮಿತಿಯ ಶ್ರೀಧರ್ ನಾಗನಹಳ್ಳಿ, ವೇದಿಕೆಯ ಉಪಾಧ್ಯಕ್ಷ ಕಲ್ಯಾಣ್ ಪಾಟೀಲ್ ಕಣ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಮಹಾಗಾಂವ್ಕರ್, ಕಾರ್ಯದರ್ಶಿ ಮಹೇಶ್ಚಂದ್ರ ಪಾಟೀಲ್ ಕಣ್ಣಿ, ಸಂಘಟನಾ ಕಾರ್ಯದರ್ಶಿ ಪರಮೇಶ್ವರ್ ಯಳಮೇಲಿ, ಸಹ ಸಂಘಟನಾ ಕಾರ್ಯದರ್ಶಿ ಆನಂದ್ ಕನಸೂರ್, ಜಿಲ್ಲಾ ಸಂಚಾಲಕರಾದ ಗುರುರಾಜ್ ಅಂಬಾಡಿ, ಸತೀಶ್ ಮಾಹೋರ್, ಸುನೀಲ್ ಕೊಳಕೂರ್, ಗುರುರಾಜ್ ಸುಂಟನೂರ್, ಅವಿನಾಶ್ ಅರಳಿ, ಮಲ್ಲು ಕೊಂಡೆದ್ ಮತ್ತು ವೇದಿಕೆ ಸದಸ್ಯರು ಉಪಸ್ಥಿತರಿದ್ದರು.
ಅದೇ ರೀತಿ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದನ್ನು ಸ್ವಾಗತಿಸಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಮೇಯರ್ ಶರಣಕುಮಾರ್ ಮೋದಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು, ಕಾರ್ಯಕರ್ತರು ನಗರದ ಜಗತ್ ವೃತ್ತದಲ್ಲಿನ ಬಸವೇಶ್ವರ್ ಪ್ರತಿಮೆಯ ಬಳಿ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ಧರ್ಮಪ್ರಕಾಶ್ ಪಾಟೀಲ್, ಬಿಜೆಪಿ ಮುಖಂಡ ಚಂದು ಪಾಟೀಲ್, ರಮೇಶ್ ಕಡಾಳೆ, ಮಲ್ಲಿನಾಥ್ ಪಾಟೀಲ್ ಮುಂತಾದವರು ಪಾಲ್ಗೊಂಡಿದ್ದರು.
ಮಹಾಂತ ಶಿವಾಚಾರ್ಯರ ಶ್ಲಾಘನೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತುಂಬಾ ಧೈರ್ಯವಂತರು. ಹಿಂದಿನ ವೀರಶೈವ ಮುಖ್ಯಮಂತ್ರಿಗಳು ಮಾಡದ ಧೈರ್ಯವನ್ನು ಯಡಿಯೂರಪ್ಪ ಅವರು ಮಾಡಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದಾರೆ ಎಂದು ಶ್ರೀಶೈಲ್ ಸಾರಂಘದರ್ ದೇಶಿಕೇಂದ್ರ ಮಹಾಂತ ಶಿವಾಚಾರ್ಯರು ಶ್ಲಾಘಿಸಿದರು.
ಬಹುದಿನಗಳ ಬೇಡಿಕೆಯನ್ನು ಮುಖ್ಯಮಂತ್ರಿಗಳು ಇಡೇರಿಸಿದ್ದಾರೆ. ಬಹುಸಂಖ್ಯಾತ ಲಿಂಗಾಯತರು ರಾಜ್ಯದಲ್ಲಿ ಇರುವ ಕಾರಣ ನಿಗಮ ಮಂಡಳಿಗೆ ಕನಿಷ್ಠ 500 ಕೋಟಿ ರೂ>ಗಳನ್ನು ಮೀಸಲಿಡುವಂತೆ ಅವರು ಒತ್ತಾಯಿಸಿದರು.
ಮುಖ್ಯಮಂತರ್ರಿಗಳ ಕಾರ್ಯಕ್ಕೆ ಜಿಲ್ಲಾ ಮಠಾಧೀಶರ ಪರವಾಗಿ ಅಭಿನಂದಿಸಿದ ಅವರು, 2ಎ ವರ್ಗದಲ್ಲಿ. ಲಿಂಗಾಯತ ಸಮುದಾಯವನ್ನು ಸೇರ್ಪಡೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ಇದೇ ವೇಳೆ ಮರಾಠಾ ಅಭಿವೃದ್ಧಿ ನಿಗಮ ಮಂಡಳಿ ಕನ್ನಡದ ನೆಲದಲ್ಲಿ ಮಾಡುವುದು ಸೂಕ್ತವಲ್ಲ. ಮರಾಠಿಗರಿಗೆ ಮಹಾರಾಷ್ಟ್ರ ಸರ್ಕಾರ ಮಂಡಳಿ ನಿರ್ಮಿಸಿ ಅಗತ್ಯ ಸೌಕರ್ಯ ಕಲ್ಪಿಸಬೇಕು. ಕರ್ನಾಟಕದಲ್ಲಿ ಮಂಡಳಿ ರಚನೆ ಸರಿಯಲ್ಲ. ಸರ್ಕಾರ ತನ್ನ ನಿರ್ಧಾರ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಬಿರಾದಾರ್ ಸ್ವಾಗತ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದ್ದು ಸ್ವಾಗತಾರ್ಹವಾಗಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಹಾಗೂ ವೀರಶೈವ ಸಮಾಜದ ಧುರೀಣ ಸುಭಾಷ್ ಬಿರಾದಾರ್ ಕಮಲಾಪೂರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ವೀರಶೈವ ಲಿಂಗಾಯತರಲ್ಲಿ ಅಪಾರ ಸಂಖ್ಯೆಯಲ್ಲಿ ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಅಂಥವರಿಗೆ ಅಭಿವೃದ್ಧಿ ಪ್ರಾಧಿಕಾರವು ಅನುಕೂಲವಾಗಲಿದೆ ಎಂದು ಅವರು ಹೇಳಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬಹಳ ದಿನಗಳ ಬೇಡಿಕೆಯನ್ನು ಸರ್ಕಾರ ಇಡೇರಿಸಿದೆ ಎಂದು ತಿಳಿಸಿರುವ ಅವರು, ಸಮಾಜವನ್ನು 2ಎಗೆ ಸೇರಿಸುವ ಸಂಬಂಧ ಸೂಕ್ತ ನಿರ್ಧಾರವನ್ನು ರಾಜ್ಯ ಸರ್ಕಾರವು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಷ್ಟಗಿ ಸಂತಸ: ವೀರಶೈವ ಲಿಂಗಾಯತ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಗಣನೀಯ ಸಂಖ್ಯೆಯಲ್ಲಿದ್ದು, ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯವು ಅತಿ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರವು ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಅಂಬಾರಾಯ್ ಅಷ್ಟಗಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ನಿಗಮದ ಸ್ಥಾಪನೆಯಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಲಿದ್ದು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರಿಯಾಗಲಿದೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ಅಭಿನಂದಿಸುವುದಾಗಿ ಅವರು ತಿಳಿಸಿದ್ದಾರೆ.