ವೀರಶೈವ-ಲಿಂಗಾಯತರು ಕಾಂಗ್ರೆಸ್ ಬೆನ್ನಿಗಿದ್ದಾರೆ: ಶರಣಪ್ರಕಾಶ್

ಕಲಬುರಗಿ,ಮೇ.5: ಕೋಟನೂರ್ ಘಟನೆಯ ರಾಜಕೀಯ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಹಾಗೂ ಬಿಜೆಪಿಯ ಡಾ.ಉಮೇಶ್ ಜಾಧವ್ ಪೈಕಿ ಯಾರು ಸಮರ್ಥ ಅಭ್ಯರ್ಥಿ ಎಂಬುದು ಪ್ರಜ್ಞಾವಂತ ವೀರಶೈವ-ಲಿಂಗಾಯತ ಸಮಾಜಕ್ಕೆ ಗೊತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ವೀರಶೈವ-ಲಿಂಗಾಯತ ಸಮಾಜದ ಮುಖಂಡರ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಜಾತಿ- ಜಾತಿಗಳ ಮಧ್ಯೆ ಸಂಘರ್ಷ ಉಂಟು ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಾ ಬಂದಿದೆ. ಇದೇ ಮನಸ್ಥಿತಿಯೊಂದಿಗೆ ಕೋಟನೂರ್ ಘಟನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಬಿಜೆಪಿ ಮುಖಂಡರು ಯತ್ನಿಸುತ್ತಿದ್ದಾರೆ. ಇನ್ನೊಂದೆಡೆ, ಕಾಂಗ್ರೆಸ್ ಎಂದಿಗೂ ಬೆಂಕಿ ಹಚ್ಚುವ ಕೆಲಸ ಮಾಡದೆ ಬೆಂಕಿ ಆರಿಸುವ ಕೆಲಸ ಮಾಡುತ್ತದೆ ಎಂದರು.
ಕೋಟನೂರ್ ಘಟನೆಯನ್ನು ಈಗಾಗಲೇ ಕಾಂಗ್ರೆಸ್ ಪ್ರಬಲವಾಗಿ ಖಂಡಿಸಿದೆ. ಮೇಲಾಗಿ, ಘಟನೆಯನ್ನು ಸಿಐಡಿ ತನಿಖೆಗೆ ವಹಿಸಿದೆ. ಯಾರೇ ಕಾನೂನು ಕೈಗೆತ್ತಿಕೊಂಡರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು. ಇನ್ನು ಕೋಟನೂರ್ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲಿನ ಭೀತಿ ಕಾಡುತ್ತಿದೆ. ಮೇಲಾಗಿ ಕಳೆದ ಐದು ವರ್ಷದಲ್ಲಿ ಜಾಧವ್ ಸಾಧನೆ ಶೂನ್ಯ ಎಂಬುದು ಜನರಿಗೆ ಗೊತ್ತಾಗಿದೆ. ಹಾಗಾಗಿ ಹತಾಶರಾಗಿ ಕೋಟನೂರ್ ಘಟನೆಯ ರಾಜಕೀಯ ಲಾಭಕ್ಕೆ ಆ ಪಕ್ಷದ ಮುಖಂಡರು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಮಲ್ಲಿಕಾರ್ಜುನ ಖರ್ಗೆ ಕುಟುಂಬ ಕಳೆದ 50 ವರ್ಷಗಳಲ್ಲಿ ಎಂದೂ ಅಟ್ರಾಸಿಟಿ ಕಾನೂನಿನ ಲಾಭ ಪಡೆಯುವ ಯತ್ನಕ್ಕೆ ಕೈ ಹಾಕಿಲ್ಲ. ಹಾಗಾಗಿ, ವೀರಶೈವ-ಲಿಂಗಾಯತ ಸಮಾಜದ ಮತದಾರರು ಕೋಟನೂರ್ ಘಟನೆ ಕುರಿತಂತೆ ಯಾವುದೇ ಊಹಾಪೆÇೀಹಗಳಿಗೆ ಕಿವಿಗೊಡಬಾರದು ಎಂದು ಡಾ.ಶರಣಪ್ರಕಾಶ್ ಮನವಿ ಮಾಡಿದರು.
ಇದೇವೇಳೆ, ಶರಣಗೌಡ ಪಾಟೀಲ್ ಪಾಳಾ ಅವರು ಸಂಸದ ಉಮೇಶ್ ಜಾಧವ್ ಚಿತಾವಣೆಯಿಂದ ತಮ್ಮ ವಿರುದ್ಧ ಕೆಲವು ಬಂಜಾರ ಮುಖಂಡರು ಅಟ್ರಾಸಿಟಿ ಪ್ರಕರಣ ದಾಖಲಿಸಿದ್ದನ್ನು ವಿವರಿಸಿ, ಜಾಧವ್ ತಮ್ಮ ಹಿತಕ್ಕೆ ತಕ್ಕಂತೆ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಾರೆ ಎಂದರು.
ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್, ಶಾಸಕರಾದ ಎಂ.ವೈ.ಪಾಟೀಲ್, ಕೆಕೆಆರ್ ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಯುವ ಮುಖಂಡರಾದ ಸಂತೋಷ್ ಬಿಲಗುಂದಿ, ಚೇತನ್ ಗೋನಾಯಕ್, ಸಮಾಜದ ಹಿರಿಯ ಮುಖಂಡ ಅಪ್ಪಾರಾವ್ ಪಾಟೀಲ್ ಅತನೂರ್ ಸೇರಿದಂತೆ ಇತರರಿದ್ದರು.


ಕೋಟನೂರ್ ಘಟನೆಯ ರಾಜಕೀಯ ಲಾಭಕ್ಕೆ ಯತ್ನ
ಕೋಟನೂರ್ ಘಟನೆ ಕುರಿತಂತೆ ಸಂಸದ ಉಮೇಶ್ ಜಾಧವ್ ರಾಜಕೀಯ ಲಾಭ ಪಡೆಯಲು ವೀರಶೈವ-ಲಿಂಗಾಯತರು ಹಾಗೂ ಪರಿಶಿಷ್ಟರ ಮಧ್ಯೆ ಸಂಘರ್ಷ ಹುಟ್ಟು ಹಾಕುತ್ತಿದ್ದಾರೆ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಟೀಕಿಸಿದರು.
ಘಟನೆಯ ಬಳಿಕ ತಾವು ಪ್ರಾಮಾಣಿಕವಾಗಿ ಕಾಂಪೆÇ್ರಮೈಸ್ ಮಾಡಿಸಲು ಯತ್ನಿಸಿದ್ದಾಗಿ ಹೇಳಿದ ಅವರು, ಮಾಜಿ ಶಾಸಕ ಅಪ್ಪುಗೌಡ ಹಾಗೂ ಸಂಸದ ಉಮೇಶ್ ಜಾಧವ್ ಸಂಘರ್ಷ ಉಂಟು ಮಾಡಲು ಯತ್ನಿಸಿದ್ದಾರೆ ಎಂದು ಟೀಕಿಸಿದರು.


ಟೂಲ್ ಕಿಟ್ ಬಳಕೆಗೆ ಬಿಜೆಪಿ ಯತ್ನ
ಈವರೆಗೆ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿಜೆಪಿ ತನ್ನ ಟೂಲ್ ಕಿಟ್ ಬಳಕೆಗೆ ಯತ್ನಿಸಿದಂತೆಯೇ ಈಗ ಕೋಟನೂರ್ ಘಟನೆಯನ್ನು ಟೂಲ್ ಕಿಟ್ ಮಾದರಿಯಲ್ಲಿ ಬಳಸಿಕೊಳ್ಳಲು ಕಲಬುರಗಿಯಲ್ಲಿ ಯತ್ನಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಚುನಾಯಿತ ರಾಜಕಾರಣದ 51 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಎಂದಿಗೂ ಅಟ್ರಾಸಿಟಿ ಕಾನೂನು ದುರ್ಬಳಕೆಗೆ ಯತ್ನಿಸಿಲ್ಲ. ತಾವು ಸಹ 20 ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಇಂತಹ ಹತಾಶ ರಾಜಕಾರಣ ಮಾಡಿಲ್ಲ. ಮತ್ತೊಂದೆಡೆ, ಬಿಜೆಪಿ ಹಿಂದೂ-ಮುಸಲ್ಮಾನ, ಲಿಂಗಾಯತ-ಎಸ್ಸಿ, ಕುರುಬ-ಎಸ್ಸಿ ಸಮುದಾಯಗಳ ಮಧ್ಯೆ ದ್ವೇಷ ಹುಟ್ಟು ಹಾಕಲು ಯತ್ನಿಸುತ್ತಿದೆ ಎಂದರು.
ಕಾಂಗ್ರೆಸ್ ಅಭಿವೃದ್ಧಿಯನ್ನೇ ಅಜೆಂಡಾ ಮಾಡಿಕೊಂಡಿದ್ದರೆ ಬಿಜೆಪಿ ದ್ವೇಷ ರಾಜಕಾರಣವನ್ನು ಅಜೆಂಡಾ ಮಾಡಿಕೊಂಡು ಹೊರಟಿದೆ ಎಂದರು.
ಖರ್ಗೆ ಕುಟುಂಬದ ಟ್ರ್ಯಾಕ್ ರೆಕಾರ್ಡ್ ಈ ರಾಜ್ಯದ ಎಲ್ಲರಿಗೂ ಗೊತ್ತಿದೆ. ಬಸವ ತತ್ವ, ಬುದ್ಧ ತತ್ವ ಹಾಗೂ ಸಂವಿಧಾನದ ತತ್ವದ ಮೇಲೆ ನಮ್ಮ ಕುಟುಂಬ ನಂಬಿಕೆ ಇಟ್ಟುಕೊಂಡು, ಈ ತತ್ವಗಳಿಗೆ ಬದ್ಧವಾಗಿ ಅಭಿವೃದ್ಧಿ ರಾಜಕಾರಣ ಮಾಡುತ್ತಿದೆ ಎಂದು ಸಚಿವ ಪ್ರಿಯಾಂಕ್ ನುಡಿದರು.