ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಮೋದಿ ನಡೆ ವಿರೋಧಿಸಿ ಪತ್ರ ಚಳುವಳಿಗೆ ಚಾಲನೆ

ಕಲಬುರಗಿ.ನ.20: ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಶರಣಕುಮಾರ್ ಮೋದಿ ಅವರ ನಡೆಯನ್ನು ವಿರೋಧಿಸಿ ನಗರದಲ್ಲಿ ಶುಕ್ರವಾರ ವೀರಶೈವ ಮಹಾಸಭೆಯ ಪತ್ರ ಚಳುವಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪತ್ರ ಚಳುವಳಿಗೆ ಚಾಲನೆ ನೀಡಿದ ಮಹಾಸಭಾದ ಹಿರಿಯ ಸದಸ್ಯ ವಿ.ಸಿ. ಪಾಟೀಲ್ ಅವರು ಮಾತನಾಡಿ, ಅಖಿಲ ಭಾರತ ವೀರಶೈವ ಮಹಾಸಭೆಯ ವತಿಯಿಂದ ನಗರದಲ್ಲಿ ನಾಲ್ಕೂವರೆ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ವೀರಶೈವ ಲಿಂಗಾಯತ ಮಹಿಳಾ ವಸತಿ ನಿಲಯದ ಗುತ್ತಿಗೆ ಕಾಮಗಾರಿಯನ್ನು ಲಿಂಗಾಯತರಿಗೆ ಕೊಡಬೇಕು ಎಂಬುದು ನಮ್ಮನ್ನೂ ಸೇರಿದಂತೆ ಎಲ್ಲ ಸಮಾಜದ ಮುಖಂಡರ ನಿರ್ಧಾರವಾಗಿತ್ತು. ಸಮಾಜದ ಕೆಲಸ ಸಮಾಜದವರು ಮಾಡಲಿ. ಅವರಿಗೂ ಅಭಿಮಾನ ಇರುತ್ತದೆ. ಅಲ್ಲಿ ಲಾಭ, ನಷ್ಟ ನೋಡದೇ ಕೆಲಸ ಮಾಡುತ್ತಾರೆ. ನಮ್ಮ ವಿದ್ಯಾರ್ಥಿನಿಯರಿಗೆ ಸುಸಜ್ಜಿತವಾದ ಕಟ್ಟಡ ಕಟ್ಟಿಕೊಡುತ್ತಾರೆ ಎನ್ನುವ ಭಾವನೆಯಿಂದ ಸಲಹೆ ನೀಡಿದ್ದರು. ಅದನ್ನು ಗಣನೆಗೆ ತೆಗೆದುಕೊಳ್ಳದೇ ಮಹಾಸಭೆಯ ಅಧ್ಯಕ್ಷರು ಲಿಂಗಾಯತರಲ್ಲದವರಿಗೆ ಗುತ್ತಿಗೆ ಕೊಟ್ಟಿದ್ದಾರೆ. ಇದು ಸಮಾಜಕ್ಕೆ ಹಾಗೂ ಸಮಾಜದ ಮುಖಂಡರಿಗೆ ಅಸಮಾಧಾನ ತಂದಿದೆ ಎಂದರು.
ಈ ಕುರಿತು ಇದೇ ನವೆಂಬ್ 29ರಂದು ವೀರಶೈವ ಕಲ್ಯಾಣ ಮಂಟಪದಲ್ಲಿ ಕರೆದಿರುವ ಮಹಾಸಭೆಯ ಸರ್ವ ಸದಸ್ಯರ ಮತ್ತು ಸಮಾಜದ ಗಣ್ಯರ ಸಭೆಗೆ ಎಲ್ಲರೂ ಆಗಮಿಸಿ ಮಹಾಸಭೆಯನ್ನು ಸರಿದಾರಿಗೆ ಕೊಂಡೊಯ್ಯುವಂತಹ ಕೆಲಸ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಯುವ ಘಟಕದ ಗೌರವಾಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ್ ಅವರು ಮಾತನಾಡಿ, ವೀರಶೈವ ಲಿಂಗಾಯತ ಹಿತ ಕಾಪಾಡಬೇಕಾದ ಮಹಾಸಭೆಯಿಂದಲೇ ಲಿಂಗಾಯತರಿಗೆ ಅನ್ಯಾಯವಾಗಿದೆ. ನೀವು ಸಮಾಜದ ಹಿತಚಿಂತಕರಾ, ವಿರೋಧಿಗಳಾ ಎಂದು ಸದಸ್ಯರು ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಗಾಗಿ ಸಮಾಜದ ಮಠಾಧಿಪತಿಗಳಾದ ಸಾರಂಘದರ ದೇಶಿಕೇಂದ್ರ ಜಗದ್ಗುರುಗಳು, ಪಾಳಾ ಶ್ರೀಗಳು, ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ರಾಜ್ಯ ವಿಧಾನ ಪರಿಷತ್ ಸದ್ಯ ಬಿ.ಜಿ. ಪಾಟೀಲ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್, ರಾಜ್ಯ ವಿಧಾನ ಪರಿಷತ್ ಮಾಜಿ ಸದಸಸ್ಯ ಅಲ್ಲಮಪ್ರಭು ಪಾಟೀಲ್, ಮಾಜಿ ಶಾಸಕ ಬಿ.ಆರ್. ಪಾಟೀಲ್, ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ್, ಉದ್ಯಮಿ ಸಂತೋಷ್ ಬಿಲಗುಂದಿ ಮುಂತಾದವರೂ ಸೇರಿದಂತೆ ಸಮಾಜದ ಎಲ್ಲ ಪ್ರಮುಖರಿಗೆ, ಜನಪ್ರತಿನಿಧಿಗಳಿಗೆ ಬರೆದಿರುವ ಪತ್ರಗಳನ್ನು ಪೋಸ್ಟ್ ಮೂಲಕ ಪತ್ರ ಚಳುವಳಿಗೆ ಚಾಲನೆ ನೀಡಲಾಯಿತು ಎಂದು ಅವರು ಹೇಳಿದರು.
ನವೆಂಬರ್ 29ರ ಸಭೆಯಲ್ಲಿ ವಸತಿ ನಿಲಯದ ಗುತ್ತಿಗೆ, ಮಠಾಧಿಪತಿಗಳನ್ನು ಗೌರವಾಧ್ಯಕ್ಷರನ್ನಾಗಿ ನೇಮಿಸುವುದು, ಈ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಮಹಿಳಾ ಘಟಕಕ್ಕೆ ಚುನಾವಣೆ, ಮಾತುಕತೆಯಂತೆ ಮೂರು ಪೆನೆಲ್ ಕಡೆಯಿಂದ 20 ತಿಂಗಳಿಗೆ ಒಬ್ಬರಂತೆ ಅಧ್ಯಕ್ಷರನ್ನಾಗಿ ಮಾಡುವ ತೀರ್ಮಾನ, ಅವಿರೋಧ ಆಯ್ಕೆ ಕುರಿತು ಆಗಿರುವ ಒಪ್ಪಂದ, ಕೇವಲ ಐದು ತಿಂಗಳ ಅವಧಿ ಉಳಿದಿರುವ ಪ್ರಸ್ತುತ ಅಧ್ಯಕ್ಷರ ನಂತರ ನೂತನ ಅಧ್ಯಕ್ಷರ ಆಯ್ಕೆ ಸೇರಿದಂತೆ ಇನ್ನೂ ಹಲವಾರು ಪ್ರಮುಖ ವಿಷಯಗಳನ್ನು ಚರ್ಚೆ ಮಾಡಬೇಕಾಗಿದೆ. ಎಲ್ಲರೂ ಭಾಗವಹಿಸುವ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾಸಭೆಯ ಜಿಲ್ಲಾ ಉಪಾಧ್ಯಕ್ಷ ರಾಜುಗೌಡ ನಾಗನಹಳ್ಳಿ, ಸದಸ್ಯರಾದ ತಾತಗೌಡ ಪಾಟೀಲ್, ಮಾಲಾ ಕಣ್ಣಿ, ಮಾಲಾ ದಣ್ಣೂರ್, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ರಾಜಶೇಖರ್ ಬಂಡೆ, ಬಸವರಾಜ್ ಇಲಕಲ್ ಮುಂತಾದವರು ಉಪಸ್ಥಿತರಿದ್ದರು.