ವೀರಶೈವ ಕಾಲೇಜಿನಲ್ಲಿ ಕನಕದಾಸ ಜಯಂತಿ


(ಸಂಜೆವಾಣಿ ಪ್ರತಿನಿಧಿಯಿಂದ)           
ನಗರದ ಪ್ರತಿಷ್ಠಿತ ವೀ.ವಿ.ಸಂಘದ ವೀರಶೈವ ಕಾಲೇಜಿನಲ್ಲಿ ಕನಕದಾಸ ಜಯಂತಿಯನ್ನು ಶ್ರದ್ದಾ ಭಕ್ತಿಗಳಿಂದ ಆಚರಿಸಲಾಯಿತು. ವೀ.ವಿ.ಸಂಘದ ಸಹಕಾರ್ಯದರ್ಶಿಗಳು ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ದರೂರು ಶಾಂತನಗೌಡರ ಅನುಪಸ್ಥಿತಿಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ.ಗಂಗಾವತಿ ವೀರೇಶ್‍ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಕನಕದಾಸರು ಸಂತ ಶ್ರೇಷ್ಠರಾಗಿದ್ದು ಅವರು ಜನಿಸಿದ ಈ ಪುಣ್ಯಭೂಮಿಯಲ್ಲಿ ನಾವೆಲ್ಲ ಜೀವಿಸುತ್ತಿರುವುದೇ ನಮ್ಮ ಸೌಭಾಗ್ಯವಾಗಿದೆ. ಎಲ್ಲಾ ಸುಖ ಸಂಪತ್ತು ವೈಭೋಗಗಳನ್ನು ತ್ಯಜಿಸಿ ಆದಿಕೇಶವನ ಆಪೇಕ್ಷೆಯಂತೆ ತಿಮ್ಮಪ್ಪ ನಾಗಿದ್ದ ವ್ಯಕ್ತಿ ಕನಕದಾಸನಾಗಿ ಪರಿವರ್ತನೆಯಾಗಿದ್ದು ಒಂದು ವಿಸ್ಮಯವಾಗಿದೆ. ಕುಲ ಕುಲ ವೆಂದು ಏಕೆ ಹೊಡೆದಾಡುವಿರಿ ತಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ದಿಟ್ಟತನದಿಂದ ಪ್ರಶ್ನಿಸಿದ ದಾಸವರೇಣ್ಯರು. ತಮ್ಮ ಜೀವಿತಾವಧಿಯಲ್ಲಿ ಅನೇಕ ಶ್ರೇಷ್ಠ ಗ್ರಂಥಗಳನ್ನು ರಚನೆ ಮಾಡಿ ಈ ಜಗತ್ತಿನಲ್ಲಿ ಕೇಶವನೊಬ್ಬನೆ ಶಾಶ್ವ್ವತ ಉಳಿದುದೆಲ್ಲವೂ ನಶ್ವರ ಎಂದು ಸಾರಿದರು. ಇಂತಹ ಶ್ರೇಷ್ಠ ಸಂತರ ಮಾರ್ಗದಲ್ಲಿ ಜೀವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. 
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಕರೇಗೌಡರು. ಸಂಗನಕಲ್ಲ್ ವೀರನಗೌಡರು ಭಾಗವಹಿಸಿ ಎಲ್ಲರಿಗೂ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಸಿ.ಸಜ್ಜನ್‍ರವರು ಮತ್ತು ಬೋಧಕ, ಭೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಣಿಶಾಸ್ರ್ತ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಮನೋಹರರವರು ಪ್ರಾಸ್ತಾವಿಕವಾಗಿ ಮಾತನಾಡಿ  ಕಾರ್ಯಕ್ರಮ ನಿರೂಪಿಸಿದರು.