ವೀರಶೈವರನ್ನು ಓಬಿಸಿಗೆ ಸೇರಿಸಲು ಒತ್ತಾಯಿಸಿ ಮಹಾಸಭಾದಿಂದ ಆ 1 ಕ್ಕೆ ನಗರದಲ್ಲಿ  ಮೆರವಣಿಗೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.30: ಕೇಂದ್ರ ಸರ್ಕಾರ ತನ್ನ ಮೀಸಲಾತಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು  ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ 
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ  ಅ 1 ರಂದು ನಗರದಲ್ಲಿ ಮೆರವಣಿಗೆ ಹಮ್ಮಿಕೊಂಡಿದೆ.
ಈ ಕುರಿತು ಇಂದು ನಗರದ ಕೊಟ್ಟೂರು ಸ್ವಾಮಿ ಮಠದ ಆವರಣದಲ್ಲಿರುವ ಮಹಾಸಭಾ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಮಹಾಸಭಾದ ಮುಖಂಡರುಗಳು ಮಹಾ ಸಭಾದ ರಾಜ್ಯ ಅಧ್ಯಕ್ಷ ಡಾ. ಎನ್.ತಿಪ್ಪಣ್ಣ ಇವರ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದೆಂದರು.
ವೀರಶೈವ ಲಿಂಗಾಯತ ಸಮುದಾಯವು ಕೃಷಿ ಮತ್ತು ಕೃಷಿ ಆಧಾರಿತ ಕಸಬುಗಳನ್ನು ಅವಲಂಬಿಸಿ ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವಾಗಿರುತ್ತದೆ, ನಮ್ಮ ಸಮಾಜದ ಜನರು ದಶಕಗಳಿಂದ ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಕೇಂದ್ರದ ನೇಮಕಾತಿಯಲ್ಲಿ ವಂಚಿತರಾಗಿರುತ್ತಾರೆ.
ಅದಕ್ಕಾಗಿ ವೀರಶೈವ ಲಿಂಗಾಯತ ಸಮಾಜದ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ, ಕೆಂದ್ರದ ಮೀಸಲಾತಿಯ ಓ.ಬಿ.ಸಿ ಪಟ್ಟಿಯಲ್ಲಿ ಸೇರಿಸಬೇಕು ಎಂಬುದು ಬೇಡಿಕೆಯಾಗಿದೆ.
ಈ  ಹಕ್ಕು ಪಡೆಯುವ ಉದ್ದೇಶದಿಂದ ಆ1ರಂದು ಬೆಳಿಗ್ಗೆ 10 ಗಂಟೆಗೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಿಂದ. ಗಡಗಿ ಚೆನ್ನಪ್ಪ ವೃತ್ತದ ಮುಖಾಂತರ, ಜಿಲ್ಲಾ ಅಧಿಕಾರಿಗಳ ಕಛೇರಿಯವರೆಗೆ ಬೃಹತ್ ಮೆರವಣಿಗೆಯೊಂದಿಗೆ ಆಗಮಿಸಿ. ಜಿಲ್ಲಾ ಅಧಿಕಾರಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮೀಸಲಾತಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಪಂಗಡಗಳನ್ನು ಸೇರಿಸುವಂತೆ ಬೇಡಿಕೆಯ ಮನವಿ ಪತ್ರ ಸಲ್ಲಿಸಲಿದೆ ಎಂದು ತಿಳಿಸಿದರು.
ಈ ಹೋರಾಟದ ಬೃಹತ್ ಮೆರವಣಿಗೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಪಂಗಡಗಳು  ಜನತೆ ಏಕತೆಯೊಂದಿಗೆ ಬಂದು ಪಾಲ್ಗೊಳ್ಳಲು ಅವರು ಮನವಿ ಮಾಡಿದ್ದಾರೆ.
ಅಲ್ಲಂ ವೀರಭದ್ರಪ್ಪ ಅವರು ಮಾತನಾಡಿ. ರಾಜ್ಯ ಕ್ಯಾಬಿನೆಟ್ ನಲ್ಲಿ ಸಮ್ಮತಿ ಪಡೆದು ಕೇಂದ್ರಕ್ಕೆ ಕಳಿಸಿತ್ತು. ಕೆಲ ಕಾರಣದಿಂದ ಕೇಂದ್ರ ಅದಕ್ಕೆ ಸಮ್ಮತಿ ನೀಡಿರಲಿಲ್ಲ. ಮತ್ತೊಮ್ಮೆ ಈಗ ಕೇಂದ್ರ ಸರ್ಕಾರದ ಮೇಲೆ  ಗಮನ ಸೆಳೆಯಲು ಈ ಹೋರಾಟ ಎಂದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅವರು ಮಾತನಾಡಿ ಬಜೆಟ್ ಜನಸಂಖ್ಯೆ ಆಧಾರದ ಮೇಲೆ ಆಗುತ್ತದೆ.  ಹಿಂದುಳಿದ ವರ್ಗಗಳ ಸೌಲಭ್ಯ ಪಡೆಯಲು, ಕೇಂದ್ರದ ಮಹತ್ವದ ಹುದ್ದೆಗಳನ್ನು ಓಬಿಸಿ ಮೀಸಲಾತಿ ಪಡೆಯಲು ನಮ್ಮ ಸಮುದಾಯಕ್ಕೆ ಅವಶ್ಯ ಇದೆ ಅದಕ್ಕಾಗಿ ಈ ಹೋರಾಟ ಎಂದರು.
ರಾಜ್ಯ ಕಾರ್ಯದರ್ಶಿ ಕೆ.ಬಿ ಶ್ರೀನಿವಾಸ ರೆಡ್ಡಿ ಅವರು ಮಾತನಾಡಿ, ವೀರಶೈವ ಲಿಂಗಾಯತರಲ್ಲಿ  108 ಉಪ ಜಾತಿಗಳಿವೆ. ನಮ್ಮ ಈ ಸಮುದಾಯವನ್ನು  ಓಬಿಸಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಎರೆಡು ಬಾರಿ ಕೇಂದ್ರಕ್ಕೆ ಮನವಿ ಮಾಡಿದೆ. ಆದರೆ ಈವರೆಗೆ ಸ್ಪಂದಿಸಿಲ್ಲ. ರಾಜ್ಯದ 25 ಸಂಸದರಲ್ಲಿ 11 ಜನ ಸಂಸದರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ರಾಜ್ಯದಿಂದ ಮೂರು ಜನ ಸಚಿವರಿದ್ದು ಅವರ ಸಹ ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದರು.
ರಾಜ್ಯದಲ್ಲಿ ನಮ್ಮ ಸಮುದಾಯವನ್ನು ಓಬಿಸಿಯಲ್ಲಿ ಸೇರಿಸಿದೆ. ಅದೇ ರೀತಿ ಕೇಂದ್ರ ಸರ್ಕಾರ ಮಾಡಬೇಕು ಎಂದು ಡಾ.ಮಹಿಪಾಲ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ   ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಸಮುದಾಯದ ಮುಖಂಡರುಗಳಾದ ಡಾ.ಎಸ್.ಜೆ.ವಿ.ಮಹಿಪಾಲ್, ಅರವಿ ಬಸವನಗೌಡ, ನಿಷ್ಠಿ ರುದ್ರಪ್ಪ, ಕೊಟ್ಟೂರು ಸ್ವಾಮಿ ಮಠದ ಬಸವರಾಜ್,ಮಹಾಸಭಾದ ಜಿಲ್ಲಾ ಅಧ್ಯಕ್ಷ ಚಾನಾಳ್ ಶೇಖರ್,  ಅಲ್ಲಂ ಪ್ರಶಾಂತ್, ಕೋರಿ ವಿರೂಪಾಕ್ಷಪ್ಪ ಗಂಗಾವತಿ ವೀರೇಶ್  ಮೊದಲಾದವರು ಇದ್ದರು