ವೀರಯೋಧರ ಬಲಿದಾನ ವ್ಯರ್ಥವಾಗಲು ಬಿಡಲ್ಲ: ಅಮಿತ್ ಶಾ ಗುಡುಗು

ಗುವಾಹಟಿ, ಏ.4-ಛತ್ತೀಸ್ ಘಡದ ನಡೆದ ದಾಳಿಯಲ್ಲಿ ವೀರ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಗುಡುಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸೂಕ್ತ ಸಮಯದಲ್ಲಿ ನಕ್ಸಲೀಯರಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ವರಿಕೆ ನೀಡಿದ್ದಾರೆ.
ರಾಯ್ಪುರದಲ್ಲಿ ನಕ್ಸಲ್ ದಾಳಿ ಹಿನ್ನೆಲೆಯಲ್ಲಿ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಪ್ರಚಾರವನ್ನು ಮೊಟಕುಗೊಳಿಸಿ ದೆಹಲಿಗೆ ವಾಪಸ್ಸಾಗಿದ್ದಾರೆ.
ನಕ್ಸಲೀಯರ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿರುವ ಯೋಧರ ಬಲಿದಾನಕ್ಕೆ ಸಂತಾಪ ಸೂಚಿಸಿರುವ ಅಮಿತ್ ಶಾ, ನಕ್ಸಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಯೋಧರ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.
ಎರಡೂ ಕಡೆಯವರಿಗೆ ಪ್ರಾಣ ಹಾನಿ ಸಂಭವಿಸಿದೆ. ತಕ್ಷಣಕ್ಕೆ ನಿಖರ ಮಾಹಿತಿ ಲಭ್ಯವಾಗಿಲ್ಲ. ನಮ್ಮ ಯೋಧರು ಹುತಾತ್ಮರಾಗಿದ್ದಾರೆ. ಆದರೆ ಈ ರಕ್ತಪಾತ ಸಹಿಸುವುದಿಲ್ಲ. ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಛತ್ತೀಸ್ ಘಡದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಸಿಆರ್‌ಪಿಎಫ್ 22 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಅನೇಕ ಯೋಧರು ಗಾಯಗೊಂಡಿದ್ದಾರೆ.

ಬಿಜಾಪುರ ಹಾಗೂ ಸುಕ್ಮಾ ಜಿಲ್ಲೆಗಳ ಗಡಿಗೆ ಹೊಂದಿರುವ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ವೇಳೆ ನಕ್ಸಲೀಯರ ಜತೆ ಗುಂಡಿನ ಕಾಳಗ ನಡೆದಿತ್ತು. ಭದ್ರತಾ ಪಡೆಗಳ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ನಕ್ಸಲರು ಅಪಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.