ವೀರಯೋಧನ ಪುತ್ರಿ ಇದೀಗ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್

ರಾಜೌರಿ, ನ.೮- ೨೦೦೨ರಲ್ಲಿ ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಟದ ವೇಳೆ ವೀರಮರಣವನ್ನಪ್ಪಿದ ಯೋಧನ ಪುತ್ರಿ ಇದೀಗ ಹರ್ಯಾಣ ಪೊಲೀಸ್ ಇಲಾಖೆಗೆ ಸೇರಿದ್ದು, ಸಬ್ ಇನ್ಸ್‌ಪೆಕ್ಟರ್ ಹುದ್ದೆ ಅಲಂಕರಿಸಲಿದ್ದಾರೆ.
೨೦೦೨ರ ಆಗಸ್ಟ್‌ನಲ್ಲಿ ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಉಗ್ರ ಸಂಘಟನೆಯ ವಿರುದ್ಧದ ಕಾರ್ಯಾಚರಣೆಯ ವೇಳೆ ಯೋಧ ಮಂಗಲ್ ರಾಮ್ ಅವರು ವೀರಮರಣವನ್ನಪ್ಪಿದ್ದರು. ಇದೀಗ ತಂದೆಯ ನಿಧನದ ೧೯ ವರ್ಷಗಳ ಬಳಿಕ ಮಗಳು, ಸದ್ಯ ಕುರಕ್ಷೇತ್ರ ನಿವಾಸಿ ನ್ಯಾನ್ಸಿ ಸೈನಿ ಹರ್ಯಾಣ ಪೊಲೀಸ್ ಇಲಾಖೆಗೆ ಸಬ್ ಇನ್ಸ್‌ಪೆಕ್ಟರ್ ಆಗಿ ನಿಯೋಜನೆಗೊಂಡಿದ್ದಾರೆ. ಸದ್ಯ ನಿಯೋಜನೆಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೈನಿ, ನನ್ನ ಸಾಧನೆಗೆ ಕುಟುಂಬದ ಸದಸ್ಯರ ಅದರಲ್ಲೂ ತಾಯಿ-ಸಹೋದರನ ಪ್ರೋತ್ಸಾಹವೇ ಕಾರಣ. ಜೀವನದ ಪ್ರತಿಯೊಂದು ಹಂತದಲ್ಲೂ ಇವರು ನನ್ನ ಬೆಂಬಲಕ್ಕೆ ನಿಂತಿದ್ದರು ಎಂದು ನಗುಮೊಗದಿಂದ ತಿಳಿಸಿದ್ದಾರೆ.