ವೀರಮಂಗಲದಲ್ಲಿ ದೇವರ ಅವಭೃತ ಸ್ನಾನ

ಪುತ್ತೂರು, ಎ.೨೦- ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನವು ಸೋಮವಾರ ಪ್ರಾತಃಕಾಲ ೫ ಗಂಟೆಗೆ ಪುತ್ತೂರಿನಿಂದ ೧೪ ಕಿ.ಮೀ. ದೂರದಲ್ಲಿರುವ ವೀರಮಂಗಲ ಕುಮಾರಾಧಾರ ನದಿಯಲ್ಲಿ ನಡೆಯಿತು. ಬಳಿಕ ಅಲಂಕಾರ ರಹಿತ ಉತ್ಸವಮೂರ್ತಿಯೊಂದಿಗೆ  ದೇವರ ಪೇಟೆ ಸವಾರಿ ಯಾವುದೇ ವಿರಾಮವಿಲ್ಲದೆ ನೇರವಾಗಿ ದೇವಾಲಯಕ್ಕೆ ಬೆಳಗ್ಗೆ ೮.೩೦ಕ್ಕೆ ಆಗಮಿಸಿತು.

ದಾಖಲಾರ್ಹ ಸಂಗತಿ

ಪ್ರತೀ ವರ್ಷ  ದೇವಾಲಯಕ್ಕೆ ವೀರಮಂಗಲದಲ್ಲಿ ಅವಭೃತ ಸ್ನಾನ ಮುಗಿಸಿ ಏ. ೧೯ರಂದು  ದೇವರು ಆಗಮಿಸುವ ಸಂದರ್ಭ ಬೆಳಗ್ಗೆ ಗಂಟೆ ೯.೩೦ ಕಳೆದಿರುತ್ತದೆ. ಈ ವರ್ಷ ಸಂಜೆ ೪.೩೦ಕ್ಕೆ ಪುತ್ತೂರಿನಿಂದ ಹೊರಟು ೪೮ ಕಟ್ಟೆಗಳಲ್ಲಿ ಕಟ್ಟೆಪೂಜೆ ಸ್ವೀಕರಿಸಿ ದಾರಿಯುದ್ದಕ್ಕೂ ಆರತಿ, ಹಣ್ಣುಕಾಯಿಗಳನ್ನು ಸ್ವೀಕರಿಸಿ ದೇವರು ಬ್ರಾಹ್ಮೀ ಮುಹೂರ್ತದ ವೇಳೆ ವೀರಮಂಗಲ ನದಿ ತಟವನ್ನು ತಲುಪಿದ್ದರು. ಬೆಳಗ್ಗೆ ೫.೩೦ಕ್ಕೆ ಅವಭೃತ ಮುಗಿಸಿ ದೇವಾಲಯಕ್ಕೆ ಬೆಳಗ್ಗೆ ೮.೧೫ಕ್ಕೆ ಮರಳಿದರು. ಇದೊಂದು ದಾಖಲಾರ್ಹ ಸಂಗತಿಯಾಗಿದೆ.

ಧ್ವಜಾವರೋಹಣ

ಸೀಮಿತ ಭಕ್ತರೊಂದಿಗೆ ವೀರಮಂಗಲ ಅವಭೃತ ಮುಗಿಸಿ  ದೇವಾಲಯಕ್ಕೆ ದೇವರು ಬಂದ ಕೂಡಲೇ ಜಾತ್ರಾ ಸಂದರ್ಭದ ಧ್ವಜಾವರೋಹಣ ನಡೆಯಿತು. ಒಂದು ಸುತ್ತು ಪ್ರದಕ್ಷಿಣೆ ಬಂದ ಬಳಿಕ ದೇವರು ಒಳಗಾದರು.  ದೇವಾಲಯದ ಆಚಾರ್ಯರ ಸಹಿತ ದೇವರೊಂದಿಗೆ ವೀರಮಂಗಲದಿಂದ ಹೊರಟ ಭಕ್ತರು ಎಲ್ಲಿಯೂ ವಿರಾಮ ಪಡೆಯದೆ ನೇರವಾಗಿ ಉತ್ಸವದೊಂದಿಗೆ ದೇವಾಲಯಕ್ಕೆ ಆಗಮಿಸಿದರು.

ಚೂರ್ಣೋತ್ಸವ

ಸೋಮವಾರ ರಾತ್ರಿ ದೇವಾಲಯದಲ್ಲಿ ಜಾತ್ರೆಯ ಪ್ರಯುಕ್ತದ ಚೂರ್ಣೋತ್ಸವ ನಡೆಯಿತು. ಬಳಿಕ ವಸಂತಪೂಜೆ ನಡೆಯಿತು. ರಾತ್ರಿ  ದೇವಾಲಯದಲ್ಲಿ ನೆಲೆಯಾಗಿರುವ ಹುಲಿಭೂತ ಮತ್ತು ರಕ್ತೇಶ್ವರಿ ದೈವಗಳ ನೇಮ ನಡೆಯಿತು. ಮಂಗಳವಾರ  ದೇವಾಲಯದಲ್ಲಿ ಸಂಪ್ರೋಕ್ಷಣೆ ಮತ್ತು ರಾತ್ರಿ ಮಂತ್ರಾಕ್ಷತೆ ವಿತರಣೆ ನಡೆಯಲಿದೆ. ಬಳಿಕ ದೇವಾಲಯದಲ್ಲಿ ನೆಲೆಯಾಗಿರುವ ಅಂಙಣತ್ತಾಯ, ಪಂಜುರ್ಲಿ ಹಾಗೂ ವಿವಿಧ ದೈವಗಳ ನೇಮ ನಡೆಯಲಿದೆ.

ಸಾರ್ವಜನಿಕ ಪ್ರವೇಶ ನಿಷೇದ

 ಮಹಾಲಿಂಗೇಶ್ವರ ದೇವಾಲಯದ ಗದ್ದೆಗೆ ಏ. ೧೯ರಿಂದ ಸಾರ್ವಜನಿಕ ಪ್ರವೇಶ ನಿಷೇದ ಮಾಡಲಾಗಿದೆ. ಜಾತ್ರೆ ಗದ್ದೆಯಲ್ಲಿ ಯಾವುದೇ ವ್ಯಾಪಾರಕ್ಕೆ ಅವಕಾಶವಿಲ್ಲ. ಕೊರೋನಾ ಮುನ್ನೆಚರಿಕೆಯ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.