ವೀರಭದ್ರೇಶ್ವರ ಸ್ವಾಮಿ ಕಾರ್ತಿಕೋತ್ಸವ

ಹೊನ್ನಾಳಿ.ಡಿ.೩೦; ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ಕಾರ್ತಿಕೋತ್ಸವದ ಮುನ್ನ ಶ್ರೀ ವೀರಭದ್ರದೇವರಿಗೆ ಮಹಾರುದ್ರಾಭಿಷೇಕ ಮತ್ತು ಸ್ವಾಮಿಯ ಗುಗ್ಗುಳ ಕಾರ್ಯಕ್ರಮ ಪ್ರತಿ ವರ್ಷ ನಡೆದುಕೊಂಡು ಬಂದಿದೆ ಎಂದು ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿಯ ದೇವಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾರುದ್ರಾಭಿಷೇಕ ಹಾಗೂ ಗುಗ್ಗುಳ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಮನುಷ್ಯನ ಬದುಕು ಸಾರ್ಥಕತೆ ಪಡೆದುಕೊಳ್ಳಲು ದೇವರ ಅನುಗ್ರಹ ಅವಶ್ಯಕ. ಕಷ್ಟ ಬಂದಾಗ ಮಾತ್ರ ದೇವರ ಮೊರೆ ಹೋಗದೇ ಸದಾ ಪರಮಾತ್ಮನನ್ನು ಸ್ಮರಣೆ ಮಾಡುವುದು ನಮ್ಮ ಕರ್ತವ್ಯವಾಗಬೇಕು ಎಂದು ತಿಳಿಸಿದರು.ಮಾಗಿಯ ಚಳಿಗಾಲದ ಆರಂಭದಲ್ಲಿ ನಡೆಯುವ ಕಾರ್ತಿಕೋತ್ಸವ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ತೈಲ ದೀಪ ಹಚ್ಚಿ ಬೆಳಗುವ ಪದ್ಧತಿ ಇದೆ. ಇದು ಚಳಿ ಪ್ರಮಾಣ ಕಡಿಮೆಯಾಗಲು ಸಹಕಾರಿಯಾಗಿದೆ. ತೈಲವನ್ನು ಉಪಯೋಗಿಸುವುದರಿಂದ ಮಾನವನ ಚರ್ಮ ಒಣಗದಂತೆ ತಡೆಯುತ್ತದೆ. ಈ ವೈಜ್ಞಾನಿಕ ಅರಿವು ನಮ್ಮ ಪೂರ್ವಜರಿಗಿತ್ತು ಎಂದು ವಿಶ್ಲೇಷಿಸಿದರು.ದೀಪ ಕತ್ತಲನ್ನು ಓಡಿಸಿ ಬೆಳಕನ್ನು ನೀಡುತ್ತದೆ. ಬೆಳಕು ಶಕ್ತಿಯ ರೂಪ. ತೈಲವನ್ನು ಹತ್ತಿಯ ಬತ್ತಿಯೊಂದಿಗೆ ಉರಿಸಿದರೆ ಪರಿಸರಕ್ಕೆ ಯಾವುದೇ ಹಾನಿ ಇಲ್ಲ ಎಂದ ಅವರು, ತೈಲವು ಬತ್ತಿಯೊಂದಿಗೆ ಹೊಗೆ ರಹಿತವಾಗಿ ಉರಿಯುತ್ತದೆ ಎಂದು ಹೇಳಿದರು.ಮಹಾರುದ್ರಾಭಿಷೇಕ ಹಾಗೂ ಗುಗ್ಗುಳ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.