ವೀರಭದ್ರೇಶ್ವರ ದೇವಾಲಯಕ್ಕೆ ವಿ.ಸೋಮಣ್ಣ ಭೇಟಿ: ರಥ ನಿರ್ಮಾಣಕ್ಕೆ ಕ್ರಮ

ಚಾಮರಾಜನಗರ, ನ.03:- ಚಾಮರಾಜನಗರ ತಾಲೂಕಿನ ಚೆನ್ನಪ್ಪನಪುರದ ವೀರಭದ್ರೇಶ್ವರ ದೇವಾಲಯಕ್ಕೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಇಂದು ಭೇಟಿ ನೀಡಿ ರಥ ಉರುಳಿಬಿದ್ದ ಪ್ರಕರಣ ಸಂಬಂಧ ಪರಿಶೀಲನೆ ನಡೆಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಸೇರಿದಂತೆ ಇನ್ನಿತರ ಅಧಿಕಾರಿಗಳೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ ಸಚಿವರು ರಥ ಉರುಳಿದ ಪ್ರಕರಣ ಸಂಬಂಧ ಸ್ಥಳೀಯ ಮುಖ್ಯಸ್ಥರಿಂದ ಮಾಹಿತಿ ಪಡೆದರು.
ಮುರಿದು ಬಿದ್ದ ರಥವನ್ನು ವೀಕ್ಷಣೆ ಮಾಡಿದ ಸಚಿವರು ಘಟನೆಯ ಕುರಿತು ಸಂಪೂರ್ಣ ವಿವರ ಪಡೆದುಕೊಂಡರು. ಬಳಿಕ ವೀರಭದ್ರೇಶ್ವರ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಮುಮ್ಮುಡಿ ಕೃಷ್ಣರಾಜ ಒಡೆಯರ್ ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಸಿ ದರ್ಜೆಯ ದೇವಾಲಯ ಇದಾಗಿದೆ. ಕಳೆದ 3 ವರ್ಷಗಳಿಂದ ರಥೋತ್ಸವ ನಡೆದಿರಲಿಲ್ಲ. ಮಳೆಯಲ್ಲಿ ನೆನೆಯದ ರೀತಿ ತೇರನ್ನು ಸಂರಕ್ಷಣೆ ಮಾಡಿದ್ದಾರೆ. ಈ ಬಾರಿ ರಥೋತ್ಸವದ ವೇಳೆ ನಡೆದಿರುವ ಘಟನೆ ವಿಷಾಧನೀಯ ಎಂದರು.
ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಹೊಸ ರಥ ನಿರ್ಮಾಣ ಸಂಬಂಧ ಕ್ರಮವಹಿಸಲಾಗುವುದು. ಮುಂದಿನ 15 ದಿನಗಳೊಳಗೆ ಹೊಸತೇರು ನಿರ್ಮಿಸಲು ಕ್ರಿಯಾ ಯೋಜನೆ ತಯಾರಿಸಲು ಸೂಚಿಸಲಾಗುವುದು. ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಚರ್ಚಿಸಿ ಸಾಧಕ ಬಾಧಕಗಳನ್ನು ಪರಿಶೀಲಿಸಿ ಮುಂದಿನ ರಥೋತ್ಸವ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಸಂಪ್ರದಾಯದಂತೆ ತೇರನ್ನು ಮುಂದುವರೆಸಿಕೊಂಡು ಹೋಗಬೇಕಿದೆ. ಮುಂದೆ ಯಾವುದೇ ರೀತಿಯ ಅನಾಹುತಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿಲಾಗುತ್ತದೆ. ರಥ ನಿರ್ಮಾಣ ಮತ್ತು ದೇವಸ್ಥಾನ ಜೀರ್ಣೋದ್ದಾರ ಸಂಬಂಧ ಮುಖ್ಯಮಂತ್ರಿಗಳ ಜೊತೆ ಸಹ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ಸಚಿವರ ಭೇಟಿಯ ಸಂದರ್ಭದಲ್ಲಿ ಸ್ಥಳೀಯರು ದೇವಾಲಯದ ಸುತ್ತಮುತ್ತಲಿನ ಸ್ಥಳ ಒತ್ತುವರಿ ತೆರವು ಹಾಗೂ ದೇವಾಲಯದ ಜೀರ್ಣೋದ್ದಾರ ಸಹ ಮಾಡಿಕೊಡುವಂತೆ ಮನವಿ ಮಾಡಿದರು. ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಉಸ್ತುವಾರಿ ಸಚಿವರು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.
ಹೆಚ್ಚುವರಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ತಹಶೀಲ್ದಾರ್ ಬಸವರಾಜು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಇನ್ನಿತರ ಅಧಿಕಾರಿಗಳು, ಗ್ರಾಮದ ಮುಖಂಡರು ಹಾಜರಿದ್ದರು.