ವೀರಭದ್ರೇಶ್ವರ ಜಯಂತ್ಯೋತ್ಸವಕ್ಕೆ ಚಾಲನೆ

ಕಲಬುರಗಿ,ಜು.11-ಸೃಷ್ಟಿಕರ್ತ ಪರಮೇಶ್ವರನ ಉಗ್ರ ರೂಪವೇ ಆಗಿರುವ ಬೆಂಕಿಪ್ರಿಯ, ಗುಗ್ಗುಳ ಪ್ರಿಯ ವೀರಭದ್ರೇಶ್ವರ ದೇವರು ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸಲು ಭೂಮಿಯ ಮೇಲೆ ಅವತರಿಸಿದ ದಿವಸವಾದ ಭಾದ್ರಪದ ಮಾಸದ ಮೊದಲ ಮಂಗಳವಾರ ಅಂದರೆ ಈ ವರ್ಷದ ಸೆಪ್ಟೆಂಬರ್ 19 2023 ರಂದು ವೀರಭದ್ರೇಶ್ವರ ಜಯಂತೋತ್ಸವವನ್ನು ಅತಿ ವಿಜೃಂಭಣೆಯಿಂದ ಪ್ರತಿ ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ಹಾಗೂ ಪ್ರತಿಯೊಂದು ಮಠಗಳಲ್ಲಿ ಮತ್ತು ಪ್ರತಿಯೊಬ್ಬರ ಮನೆ ಮನಗಳಲ್ಲಿ ಭಕ್ತಿ ಭಾವದಿಂದ ಆಚರಿಸಿ ವೀರಭದ್ರೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕೆಂದು ವೀರಶೈವ ಲಿಂಗಾಯತ ಸಂಘಟನೆ ವೇದಿಕೆಯ ವೀರಭದ್ರೇಶ್ವರ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಸಿ.ಎಂ.ಶಿವಶರಣಪ್ಪ ಮನವಿ ಮಾಡಿದರು.
ವೀರಭದ್ರೇಶ್ವರ ಜಯಂತೋತ್ಸವ 2023 ಪ್ರಚಾರ ಆಂದೋಲನಕ್ಕೆ ನಗರದ ರಾಯಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರನ ಭವ್ಯ ಪೂಜೆ ಮಾಡುವದರೊಂದಿಗೆ ವೀರಭದ್ರೇಶ್ವರ ಜಯಂತ್ಯೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ರಾಯಚೋಟಿ ವೀರಭದ್ರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಗಂಗಾಧರ ಸ್ವಾಮಿ ಅಗ್ಗೀಮಠ ಅವರು ಆಶೀರ್ವದಿಸಿದರು. ನಿಜಲಿಂಗ ಮೂರ್ತಿ ಅಗ್ಗಿಮಠ, ಬಸವರಾಜ್ ಕಮರಡಗಿ, ಶ್ರೀಶೈಲ್ ಕೊಳಕೂರ್, ದೇವೇಂದ್ರ ಪತ್ತಾರ್, ಶರಣು ರಾಂಪುರೆ, ಸಚಿನ್ ನಂದ್ಯಾಳ್, ಚಂದ್ರಕಾಂತ್ ಕಾಳಗಿ ಉಪಸ್ಥಿತರಿದ್ದರು.