ನವದೆಹಲಿ, ಅ.೨೬-ಕಾಡುಗಳ್ಳ,ನರಹಂತಕ ವೀರಪ್ಪನ್ ಬಲಗೈ ಬಂಟ ೨೨ ಮಂದಿ ಪೊಲೀಸರನ್ನು ಹತ್ಯೆಗೈದ ಪ್ರಕರಣದ ದೋಷಿ ಜ್ಞಾನಪ್ರಕಾಶ್‌ಗೆ ವಿಧಿಸಿರುವ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲು ಅನುಮತಿ ಇಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ.
ಈ ಕುರಿತು ಕೇಂದ್ರ ಸರ್ಕಾರವು ೨೦೨೩ರ ಸೆಪ್ಟೆಂಬರ್‌ನಲ್ಲಿಯೇ ತೀರ್ಮಾನ ತೆಗೆದುಕೊಂಡಿದ್ದು,ಅದರ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ಗೆ ನೀಡಿದೆ.
ಕಳೆದ ೧೯೯೩ರಲ್ಲಿ ಕರ್ನಾಟಕದಲ್ಲಿ ನೆಲಬಾಂಬ್ ಸ್ಫೋಟಿಸಿ ೨೨ ಪೊಲೀಸರನ್ನು ಕೊಲೆಗೈದ ಪ್ರಕರಣದಲ್ಲಿ ಜ್ಞಾನಪ್ರಕಾಶ್‌ಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ.
ಪ್ರಕರಣದಲ್ಲಿ ಜ್ಞಾನಪ್ರಕಾಶ್ ೩೦ ವರ್ಷ ಸೆರೆವಾಸ ಅನುಭವಿಸಿದ್ದಾನೆ. ಹಾಗಾಗಿ, ಜ್ಞಾನಪ್ರಕಾಶ್‌ಗೆ ವಿಧಿಸಿರುವ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಬೇಕು ಹಾಗೂ ಆತನನ್ನು ಬಿಡುಗಡೆ ಮಾಡುವಂತೆ ಕೋರಿಜ್ಞಾನಪ್ರಕಾಶ್ ಪತ್ನಿ ಸೆಲ್ವಾ ಮೇರಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ, ಜೀವಾವಧಿ ಶಿಕ್ಷೆಗೆ ಇಳಿಸಲು ಅನುಮತಿ ಇಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿರುವ ಜ್ಞಾನಪ್ರಕಾಶ್‌ಗೆ ಕಳೆದ ವರ್ಷ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಈಗ ಜಾಮೀನನ್ನು ಮತ್ತೆ ಮೂರು ತಿಂಗಳು ವಿಸ್ತರಿಸಿದೆ. ಹಾಗೆಯೇ, ಜೀವಾವಧಿ ಶಿಕ್ಷೆಗೆ ಇಳಿಸಲು ಕೇಂದ್ರ ಸರ್ಕಾರ ನಕಾರ ವ್ಯಕ್ತಪಡಿಸಿರುವುದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಕೂಡ ಸರ್ವೋಚ್ಚ ನ್ಯಾಯಾಲಯವು ಸೆಲ್ವಾ ಮೇರಿ ಅವರಿಗೆ ತಿಳಿಸಿದೆ.
ಕಾಡುಗಳ್ಳ ವೀರಪ್ಪನ್ ಆಪ್ತರಲ್ಲಿ ಜೀವಂತವಾಗಿರುವ ಏಕೈಕ ವ್ಯಕ್ತಿ ಎಂದರೆ ಅದು ಜ್ಞಾನಪ್ರಕಾಶ್. ಸೈಮನ್, ಮೀಸೆಕಾರ ಮಾದಯ್ಯ ಹಾಗೂ ಬಿಲಾವೇಂದ್ರನ್ ಅವರು ಈಗಾಗಲೇ ಜೈಲಿನಲ್ಲಿ ಮೃತಪಟ್ಟಿದ್ದಾರೆ. ವಯಸ್ಸು ಹಾಗೂ ಅನಾರೋಗ್ಯದ ಕಾರಣದಿಂದಾಗಿ ಅವರು ಮೃತಪಟ್ಟಿದ್ದಾರೆ. “ಜ್ಞಾನಪ್ರಕಾಶ್ ೨೨ ಪೊಲೀಸರ ಹತ್ಯೆಗೆ ಕಾರಣವಾಗಿದ್ದಾನೆ ಹಾಗೂ ಇದು ಗಂಭೀರ ಪ್ರಕರಣವಾಗಿದೆ. ದೇಶದ ಆಂತರಿಕ ಭದ್ರತೆಗೂ ಈ ಪ್ರಕರಣ ಆತಂಕ ತಂದಿದೆ. ಹಾಗಾಗಿ, ಜೀವಾವಧಿ ಶಿಕ್ಷೆಗೆ ಇಳಿಸಲು ಆಗುವುದಿಲ್ಲ” ಎಂದು ಕೇಂದ್ರ ಸರ್ಕಾರವು ತಿಳಿಸಿದೆ.