ವೀರನಪುರ ಸರ್ಕಾರಿ ಗೋಮಾಳ ತೆರವು ನಾಮಫಲಕ ಅಳವಡಿಕೆ

ಚಾಮರಾಜನಗರ, ಮೇ. 30:- ತಾಲೂಕಿನ ವೀರನಪುರ ಗ್ರಾಮದ ವ್ಯಾಪ್ತಿಯಲ್ಲಿರುವ ಸರ್ಕಾರಿ ಗೋಮಾಳವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ತೆರವು ಮಾಡಿ ನಾಮಫಲಕ ಅಳವಡಿಸಿದರು.
ವೀರನಪುರ ಸರ್ವೇ ನಂ.80 ರಲ್ಲಿ 136.02 ಎಕರೆ ಸರ್ಕಾರಿ ಗೋಮಾಳ ಪ್ರದೇಶ ಇದೆ. ಈ ಪ್ರದೇಶದ ಸುತ್ತಮುತ್ತಲಿನಲ್ಲಿ ರೈತರ ಜಮೀನುಗಳಿದ್ದು, ಈ ಪ್ರದೇಶವು ಜಾನುವಾರುಗಳಿಗೆ ಮೇವು ನೀಡುವ ತಾಣವಾಗಿದೆ. ಈ ಬಗ್ಗೆ ರೈತರು ತಾಲೂಕು ಕಚೇರಿಗೆ ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ಸರ್ವೇ ಮಾಡಿಸಿ, ಗೋಮಾಳ ಎಂದು ಘೋಷಣೆ ಮಾಡಿದ್ದಾರೆ.
ತಹಶೀಲ್ದಾರ್ ಬಸವರಾಜು ಅವರ ಸೂಚನೆ ಮೇರೆಗೆ ಕಂದಾಯ ನಿರೀಕ್ಷಕ ಷಡಕ್ಷರಿ ಹಾಗೂ ಗ್ರಾಮ ಆಡಳಿತಾಧಿಕಾರಿ ಸಂತೋಷ್ ನೇತೃತ್ವದಲ್ಲಿ ಸಿಬ್ಬಂದಿಗಳು ತೆರಳಿ 136 ಎಕರೆ ಪ್ರದೇಶವನ್ನು ಸರ್ವೇ ಮಾಡಿ, ಸುತ್ತೋಲೆಯ ಬಗ್ಗೆ ಈ ಭಾಗದ ರೈತರಿಗೆ ಮನವರಿಕೆ ಮಾಡಿಕೊಡುವ ಜೊತೆಗೆ ಈ ವ್ಯಾಪ್ತಿಯ ಜಮೀನು ಸರ್ಕಾರಿ ಗೋಮಾಳ ಎಂದು ನಾಮಫಲಕವನ್ನು ಆಳವಡಿಸಿದರು. ಈ ಸಂದರ್ಭದಲ್ಲಿ ವೀರನಪುರ ಹಾಗು ಸುತ್ತಮುತ್ತಲಿನ ಜಮೀನಿನ ರೈತರು ಇದ್ದರು.