ವೀಕೆಂಡ್ ಲಾಕ್ ಡೌನ್. ಕೂಡ್ಲಿಗಿಯಲ್ಲಿ ಎರಡನೇ ದಿನವೂ ಸಂಪೂರ್ಣ ಯಶಸ್ವಿ.

ಕೂಡ್ಲಿಗಿ.ಏ. 25 :- ಮಹಾಮಾರಿ ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಲಾಕ್ ಡೌನ್ ಗೆ ಕೂಡ್ಲಿಗಿ ಜನತೆ ಸರ್ಕಾರದ ನಿಯಮವನ್ನು ಪಾಲಿಸುವ ಜೊತೆಗೆ ಉತ್ತಮ ಸಹಕಾರ ನೀಡುತ್ತಿದ್ದು ಎರಡನೇ ದಿನವಾದ ಇಂದು ಸಹ ವೀಕೆಂಡ್ ಲಾಕ್ ಡೌನ್ ಸಂಪೂರ್ಣ ಯಶಸ್ವಿಯಾಗಿದೆ. ಕಳೆದ ವರ್ಷದ ಕಠಿಣ ಲಾಕ್ ಡೌನ್ ಅನುಭವಿಸಿದ ಜನತೆ ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡ ನಿಯಮವನ್ನು ಈ ಭಾರೀ ತಪ್ಪದೆ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಿದ್ದು ಅಲ್ಲದೆ ಪಟ್ಟಣದ ಓಣಿ ಓಣಿ ಗಳಲ್ಲೂ ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿದೆ ಅಲ್ಲದೆ ಪಟ್ಟಣದಲ್ಲಿ ಮೂರುವರ್ಷಕ್ಕೊಮ್ಮೆ ಆಚರಿಸುತ್ತಿದ್ದ ಗುಳೆಲಕ್ಕಮ್ಮನ ಜಾತ್ರೆ ನೆನಪಿಸುತ್ತಿತ್ತು. ಬೆಳಿಗ್ಗೆ 10ಗಂಟೆಯೊಳಗೆ ಬೇಕಾದ ದಿನಸಿ ವಸ್ತುಗಳನ್ನು ತಂದ ಜನತೆ ಆಮೇಲೆ ಉರಿಬಿಸಿಲಿಗೆ ಹೊರಬಾರದೇ ಮತ್ತು ಲಾಕ್ ಡೌನ್ ನಿಯಮ ಪಾಲಿಸಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂದು ಅರಿತು ಕೋವಿಡ್ ನಿಯಂತ್ರಣಕ್ಕೆ ಜನರೇ ಮುಂದಾಗಿರುವ ಪ್ರಸಂಗ ಕೂಡ್ಲಿಗಿಯಲ್ಲಿ ಕಂಡುಬಂದಿತು.
ಜನರಿಲ್ಲದಿದ್ದರು ಸಾರಿಗೆ ಬಸ್ ಸಂಚಾರ :- ಲಾಕ್ ಡೌನ್ ಪಾಲನೆಯಲ್ಲಿ ಜನರು ಹೊರಬರದೆ ಇರುವ ಈ ಸಂದರ್ಭದಲ್ಲಿ ಕೂಡ್ಲಿಗಿ ಘಟಕದಲ್ಲಿ ಸಾರಿಗೆ ಬಸ್ ಸಂಚಾರ ನಡೆಸಿದ್ದು ಕೂಡ್ಲಿಗಿ ಘಟಕದಿಂದ ಹತ್ತಕ್ಕೂ ಹೆಚ್ಚು ಬಸ್ಸುಗಳು ಹೊಸಪೇಟೆ, ಬಾಗಲಕೋಟ, ಬೆಂಗಳೂರು, ಬಳ್ಳಾರಿಯತ್ತ ಸಿಗುವ ಬೆರಳೆಣಿಕೆಯ ಪ್ರಯಾಣಿಕರನ್ನು ಕರೆದುಕೊಂಡು ಹೋಗಿರುವುದು ತಿಳಿದಿದೆ. ಆದರೆ ಸುತ್ತಮುತ್ತಲಿನ ಹಳ್ಳಿಗಳಿಗೆ ಬಸ್ಸುಗಳಿಲ್ಲದೆ ಜನರು ನಿನ್ನೆ ಚೋರನೂರು ಸೇರಿದಂತೆ ಇತರೆ ಭಾಗದ ಗ್ರಾಮಗಳಿಗೆ ಯಾವುದೇ ವಾಹನವಿಲ್ಲದೆ ಕುಟುಂಬ ಸಮೇತ ನಡೆದುಕೊಂಡು ಹೋದ ಪ್ರಸಂಗ ಸಹ ಜರುಗಿದೆ.