ವೀಕೆಂಡ್ ಲಾಕ್‍ಡೌನ್ ಫೀಲ್ಡಿಗಿಳಿದ ತಹಸೀಲ್ದಾರ್

ಹಗರಿಬೊಮ್ಮನಹಳ್ಳಿ: ಏ.25 ಬೆಳಗ್ಗೆಯಿಂದಲೇ ಇಲ್ಲಿಯ ತಹಸೀಲ್ದಾರ್ ಶರಣಮ್ಮ ಸ್ವತಃ ಲಾಠಿ ಹಿಡಿದು ಫೀಲ್ಡಿಗಿಳಿದ ಪರಿಣಾಮವಾಗಿ ನಗರ ಸಂಪೂರ್ಣ ವ್ಯಾಪಾರ ವಹಿವಾಟನ್ನು ಬಂದ್ ಮಾಡಿಕೊಂಡಿತ್ತು. ರಾಜ್ಯ ಸರ್ಕಾರ ಹೊರಡಿಸಿರುವ ವೀಕೆಂಡ್ ಲಾಕ್‍ಡೌನ್‍ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಸಾರ್ವಜನಿಕರು ಸಹಕರಿಸುತ್ತಿದ್ದಾರೆ ಎಂದು ತಹಸಿಲ್ದಾರ್ ಶರಣಮ್ಮ ಹೇಳಿದರು.
ಪಟ್ಟಣದಲ್ಲಿ ಅವರು ಪತ್ರಿಕೆಯೊಂದಿಗೆ ಮಾತನಾಡಿ ಕೊರೋನಾ ವೈರಸ್‍ನ ಎರಡನೇ ಅಲೆ ಅತೀ ಭೀಕರವಾಗಿದ್ದು, ಸುಖಾಸುಮ್ಮನೆ ಓಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ನಿಯಮಾವಳಿಯನ್ನು ಎಲ್ಲರೂ ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸಲೇ ಬೇಕಿದೆ.
ಅದೇ ರೀತಿ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುವ ಮದುವೆ ಸಮಾರಂಭಗಳಿಗೆ ಕಡ್ಡಾಯವಾಗಿ ತಾಲ್ಲೂಕು ಆಡಳಿತದಿಂದ ಪರವಾನಿಗೆಯನ್ನು ಪಡೆಯಲೇ ಬೇಕು. ಮದುವೆ ಸಮಾರಂಭಕ್ಕೆ 50 ಜನರಿಗೆ ಮಾತ್ರ ಪಾಸ್ ವಿತರಿಸಲಾಗುವುದು. ಒಂದು ವೇಳೆ ಪಾಸ್‍ಗಳಿಗಿಂತ ಹೆಚ್ಚಿನ ಜನರು ಸೇರಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಮದುವೆಗೆ ಬರುವ 50 ಜನರೂ ಸಹ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿರುತ್ತದೆ. ನಿಯಮಗಳ ಉಲ್ಲಂಘನೆಯಾದಲ್ಲಿ ಮದುವೆ ಆಯೋಜಕರಿಗೆ ಮತ್ತು ಕಲ್ಯಾಣ ಮಂಟಪದ ಮಾಲಿಕರು ದಂಡ ವಿಧಿಸುವುದರ ಜೊತೆಗೆ ಅವಶ್ಯವಿದ್ದಲ್ಲಿ ಅವರ ಮೇಲೆ ಪ್ರಕರಣವನ್ನು ದಾಖಲಿಸಬಹುದಾಗಿದೆ.
ಮಾಸ್ಕನ್ನು ಕಡ್ಡಾಯಗೊಳಿಸಲಾಗಿದ್ದು ವಾಹನ ಸವಾರರು ಮಾಸ್ಕ್ ಇಲ್ಲದೇ ಸಂಚಾರ ಮಾಡುವಂತಿಲ್ಲ. ಪ್ರತಿ ಶನಿವಾರ ಮತ್ತು ಭಾನುವಾರ ವೀಕೆಂಡ್ ಲಾಕ್‍ಡೌನ್ ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತದೆ. ವಾರದ ಉಳಿದ ದಿನಗಳಲ್ಲಿ ಅಗತ್ಯ ವಸ್ತುಗಳ ಸೇವೆಯನ್ನು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗುವುದು. ಹೋಟೆಲ್ ಮಾಲಿಕರು ತಿಂಡಿತಿನಿಸು, ಊಟಗಳನ್ನು ಪಾರ್ಸಲ್ ಕೊಡಲು ಮಾತ್ರ ಅವಕಾಶವಿದ್ದು ಇಲ್ಲೂ ಜನ ಗುಂಪು ಗುಂಪು ಸೇರುವಂತಿಲ್ಲ. ಸರ್ಕಾರದ ಆದೇಶದಂತೆ ಪ್ರತಿದಿನ ನೈಟ್‍ಕಫ್ರ್ಯೂ ಜಾರಿಯಲ್ಲಿರುತ್ತದೆ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಜಾರಿಗೆ ತಂದಿರುವ ಈ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿ ಪರಮೇಶ್ವರಪ್ಪ ಸೇರಿದಂತೆ ತಾಲ್ಲೂಕು ಕಛೇರಿಯ ಸಿಬ್ಬಂಧಿಗಳು ಉಪಸ್ಥಿತರಿದ್ದರು.