ವೀಕೆಂಡ್ ಲಾಕ್‍ಡೌನ್‍ಗೆ ಉತ್ತಮ ಪ್ರತಿಕ್ರಿಯೆ

ಹನೂರು: ಸರ್ಕಾರ ವಾರಂತ್ಯ ಕಪ್ರ್ಯೂ ಜಾರಿ ಮಾಡಿರುವ ಹಿನ್ನಲೆಯಲ್ಲಿ ಮೊದಲ ದಿನವಾದ ಶನಿವಾರ ಹನೂರು ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಯಶಸ್ವಿ ವೀಕೆಂಡ್ ಲಾಕ್‍ಡೌನ್‍ಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತು.
ತಾಲ್ಲೂಕು ಕೇಂದ್ರ ಸ್ಥಾನ ಹನೂರು ಪಟ್ಟಣದಲ್ಲಿ ಮೆಡಿಕಲ್ಸ್, ಆಸ್ಪತ್ರೆಗಳು, ಸೇರಿದಂತೆ ಇನ್ನಿತರೆ ಅಗತ್ಯ ಸೇವೆಗಳು ಸಾರ್ವಜನಿಕರಿಗೆ ಲಭ್ಯವಿದ್ದವು. ಉಳಿದಂತೆ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಸಾರ್ವಜನಿಕರು ಸಹ ಉತ್ತಮವಾಗಿ ಸ್ಪಂದಿಸಿದ್ದು ಕಂಡು ಬಂದಿತು.
ಬೆರಳೆಣಿಕೆಯಷ್ಟು ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಅಂತರಾಜ್ಯ ತಮಿಳುನಾಡಿನ ಬಸ್‍ಗಳು ರಸ್ತೆಗಿಳಿದಿದ್ದು ಕಂಡು ಬಂದಿತು. ಆದರೆ ಪ್ರಯಾಣಿಕರು ಹೆಚ್ಚಾಗಿ ಕಂಡು ಬರಲಿಲ್ಲ. ಇನ್ನೂ ಖಾಸಗಿ ಬಸ್‍ಗಳು ರಸ್ತೆಗಿಳಿದಿರಲಿಲ್ಲ. ಎಲ್ಲೋ ಬೋರ್ಡ್ ಕಾರುಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದವು. ಹೋಟೆಲ್‍ಗಳು ಮುಚ್ಚಲ್ಪಟ್ಟಿದ್ದವು.
ಪೊಲೀಸರು ಇಂದು ಬೆಳಿಗ್ಗೆ 4 ಗಂಟೆಗಳ ಕಾಲ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿದ್ದರು. ನಂತರ ಅಂಗಡಿಮುಗ್ಗಟ್ಟುಗಳನ್ನು ಮುಚ್ಚಲು ಸೂಚಿಸಿದರು. ಮುಂಜಾಗ್ರತ ಕ್ರಮವಾಗಿ ಪೊಲೀಸರು ಬಿಗಿಬಂದುಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲವು ಗ್ರಾಮಗಳಲ್ಲಿಯೂ ಸಹ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ವಾರಂತ್ಯ ಲಾಕ್‍ಡೌನ್‍ಗೆ ಬೆಂಬಲ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.