ವೀಕೆಂಡ್ ಕರ್ಫ್ಯೂ ವೇಳೆ ಬಸ್ ಸಂಚಾರವಿಲ್ಲ

ಉಡುಪಿ, ಎ. ೨೪- ಕೊರೋನ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ರಾತ್ರಿ ೯ ಗಂಟೆಯಿಂದ ಸೋಮವಾರ ಮುಂಜಾನೆ ೮ ಗಂಟೆಯವರೆಗೆ ವಿಧಿಸಿರುವ ವೀಕೆಂಡ್ (ವಾರಾಂತ್ಯ) ಕರ್ಫ್ಯೂ ವೇಳೆ ಉಡುಪಿ ಜಿಲ್ಲೆಯಾದ್ಯಂತ ಯಾವುದೇ ಬಸ್ ಸಂಚಾರವಿರುವುದಿಲ್ಲ ಎಂದು ಉಡುಪಿ ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ ಖಾಸಗಿ ಬಸ್ ಮಾಲಕರ ಸಂಘದ ಖಜಾಂಚಿ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಸಂಪೂರ್ಣ ಲಾಕ್‌ಡೌನ್ ಪರಿಸ್ಥಿತಿ ಇದ್ದು, ಜನ ಸಂಚಾರವೇ ಇಲ್ಲದಿರುವುದರಿಂದ ಸರಕಾರ ಶೇ.೫೦ ಸೀಟು ಭರ್ತಿಯೊಂದಿಗೆ ಬಸ್ ಓಡಿಸಲು ಅನುಮತಿ ನೀಡಿದ್ದರೂ, ಖಾಸಗಿ ಬಸ್ ಮಾಲಕರು ಬಸ್‌ಗಳನ್ನು ಓಡಿಸದಿರಲು ನಿರ್ದರಿಸಿದ್ದಾರೆ ಎಂದವರು ಹೇಳಿದರು. ರಾಜ್ಯ ಸರಕಾರ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲವನ್ನೂ ಮುಚ್ಚಲು ಆದೇಶಿಸಿರುವುದರಿಂದ ಶನಿವಾರ ಮತ್ತು ರವಿವಾರ ಯಾವುದೇ ಚಟುವಟಿಕೆಗಳು ಇರುವುದಿಲ್ಲ. ಈ ವೇಳೆ ಜನಸಂಚಾರವೇ ಇಲ್ಲದಿರುವುದರಿಂದ ಬಸ್‌ಗಳನ್ನು ಓಡಿಸುವುದರಿಂದ ಈಗಾಗಲೇ ನಷ್ಟದಲ್ಲಿರುವ ಬಸ್ ಮಾಲಕರು ಇನ್ನಷ್ಟು ನಷ್ಟ ಹೊಂದಲು ಬಯಸದೇ ಬಸ್ ಓಡಿಸದಿರಲು ನಿರ್ಧರಿಸಿದ್ದಾರೆ ಎಂದವರು ತಿಳಿಸಿದ್ದಾರೆ. ಶೇ.೫೦ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚಾರಕ್ಕೆ ಸರಕಾರ ಅವಕಾಶ ನೀಡಿದೆ. ಆದರೆ ಈಗಾಗಲೇ ನಷ್ಟದಲ್ಲೇ ಓಡುತ್ತಿರುವ ಸ್ಥಿತಿ, ತೈಲಗಳ ದುಬಾರಿ ಬೆಲೆಯ ಕಾರಣಕ್ಕೆ ವಿಕೇಂಡ್ ಕರ್ಫ್ಯೂ ಇರುವವರೆಗೆ ಬಸ್‌ಗಳನ್ನು ಓಡಿಸದಿರಲು ನಿರ್ಧರಿಸಲಾಗಿದೆ. ಆದರೆ ಇದನ್ನು ಬಸ್ ಮಾಲಕರ ಆಯ್ಕೆಗೆ ಬಿಡಲಾಗಿದೆ ಎಂದರು. ಈ ನಡುವೆ ವಾರದ ದಿನಗಳಲ್ಲೂ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಸೇವೆಗಳನ್ನು ಮುಚ್ಚಲು ಸರಕಾರ ಮಾರ್ಗಸೂಚಿಗಳನ್ನು ಹೊರಡಿಸಿರುವುದರಿಂದ ಮೇ ೪ರವರೆಗೆ ಬಸ್‌ಗಳನ್ನು ಓಡಿಸದಿರುವ ಬಗ್ಗೆ ಖಾಸಗಿ ಬಸ್ ಮಾಲಕರು ಚಿಂತನೆ ನಡೆಸಿದ್ದಾರೆ. ವಾಣಿಜ್ಯ ಚಟುವಟಿಕೆಗಳೆಲ್ಲವೂ ನಿಂತಿರುವುದು, ಜನರ ಸಂಚಾರವೂ ತೀರಾ ಕಡಿಮೆಯಾಗಿರುವುದು ಹಾಗೂ ಬಸ್‌ನಲ್ಲಿ ಶೇ.೫೦ಕ್ಕಿಂತ ಹೆಚ್ಚು ಜನರನ್ನು ಕರೆದೊಯ್ಯಲು ಜಿಲ್ಲಾಡಳಿತ ಅವಕಾಶ ನೀಡದಿರುವುದರಿಂದ ಮೇ ೪ರವರೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಪೂರ್ಣ ಬಸ್ ಸಂಚಾರವನ್ನೇ ಸ್ಥಗಿತಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ಹೆಚ್ಚಿನ ಬಸ್ ಮಾಲಕರು ಒಲವು ತೋರಿಸಿದ್ದಾರೆ ಎಂದವರು ನುಡಿದರು. ಮುಂದಿನವಾರ ಮಂಗಳೂರಿನಲ್ಲಿ ಕೆನರಾ ಬಸ್ ಮಾಲಕರ ಸಂಘ, ಖಾಸಗಿ ಬಸ್ ಮಾಲಕರ ಸಂಘಗಳ ಸಭೆ ನಡೆಯಲಿದ್ದು, ಇದರಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಂಘವೇ ಈ ಬಗ್ಗೆ ನಿರ್ಣಯಕೈಗೊಳ್ಳಬೇಕೆ ಅಥವಾ ಬಸ್ ಮಾಲಕರಿಗೆ ನಿರ್ಧಾರವನ್ನು ಬಿಡಬೇಕೆ ಎಂಬ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದರು. ನಮಗೆ ಈಗಿರುವ ಹೊರೆಯೇ ಸಾಲದೆಂಬಂತೆ ಶೇ.೫೦ಕ್ಕಿಂತ ಹೆಚ್ಚು ಜನರನ್ನು ಬಸ್‌ನಲ್ಲಿ ಹಾಕಿದರೆ, ಜಿಲ್ಲಾಡಳಿತ ಕೇಸು ಜಡಿದು ದಂಡ ವಿಧಿಸುತ್ತದೆ. ಬಸ್‌ನಲ್ಲಿದ್ದ ಜನರನ್ನು ನಡು ರಸ್ತೆಯಲ್ಲಿ ಇಳಿಸಿದರೆ ಅದರಿಂದ ಜನ ಬಯ್ಯುವುದು ನಮಗೆ. ಸಂಜೆ ೫ ಗಂಟೆಯ ಬಳಿಕ ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರ ವಿರಳವಿರುವುದರಿಂದ ಬರುವ ವಿದ್ಯಾರ್ಥಿಗಳು, ಮಹಿಳೆಯರನ್ನು ಬಿಟ್ಟುಹೋಗಲು ಆಗುವುದಿಲ್ಲ. ಆದರೆ ಇದು ಜಿಲ್ಲಾಡಳಿತಕ್ಕೆ ಅರ್ಥವೇ ಆಗುವುದಿಲ್ಲ ಎಂದು ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದರು.