ವಿ.ವಿ.ಪ್ಯಾಟ ಮೂಲಕ ಮತದಾನ ಖಚಿತಪಡಿಸಿಕೊಳ್ಳಿ

ಗದಗ,ಮಾ3 : ಪ್ರಜಾಪ್ರಭುತ್ವ ಬಲಿಷ್ಟಗೊಳಿಸುವಲ್ಲಿ ಮತದಾನವು ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬ ಅರ್ಹ ಮತದಾರರು ತಪ್ಪದೇ ತಮ್ಮ ಮತ ಚಲಾಯಿಸಬೇಕು ಎಂದು ರೋಣ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ನಾಯಕ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿಯಿಂದ ರೋಣ ಕೋರ್ಟ ಹಾಲ್‍ದಲ್ಲಿ ಆಯೋಜಿಸಲಾದ ವಿದ್ಯುನ್ಮಾನ ಮತಯಂತ್ರದ ಬಳಕೆ ಕುರಿತು ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕರಿಗೆ ಪ್ರಸ್ತುತಪಡಿಸಿ ಮಾತನಾಡಿದರು. ಅರ್ಹ ಮತದಾರರು ಚಲಾಯಿಸುವ ಮತವು ಚಲಾಯಿಸಿದ ಪಕ್ಷ ಅಥವಾ ವ್ಯಕ್ತಿಗೆ ದಾಖಲಾದ ಬಗ್ಗೆ ಖಾತರಿಪಡಿಸಿಕೊಳ್ಳಲು ವಿ.ವಿ.ಪ್ಯಾಟ ಯಂತ್ರ ಸಹಾಯವಾಗಲಿದೆ ಎಂದರು.
ಪ್ರತಿ ಮತಗಟ್ಟೆಯಲ್ಲಿ ವಿದ್ಯುನ್ಮಾನ ಮತಯಂತ್ರ (ಇ.ವಿ.ಎಂ) ಹಾಗೂ ವಿ.ವಿ.ಪ್ಯಾಟ ಪೆಟ್ಟಿಗೆ ಇಡಲಾಗುತ್ತದೆ. ಮತದಾರ ಮತಗಟ್ಟೆಗೆ ಮತಚಲಾಯಿಸಲು ಬಂದಾಗ ಮತಯಂತ್ರದಲ್ಲಿ ಹಸಿರು ದೀಪ ಉರಿಯುತ್ತಿರುವದನ್ನು ಖಚಿತಪಡಿಸಿಕೊಂಡು ಬ್ಯಾಲೇಟ್ ಯುನಿಟನಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರು, ಚಿಹ್ನೆಯ ಎದುರು ಇರುವ ನೀಲಿ ಗುಂಡಿ ಒತ್ತುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ನಂತರ ಕೆಂಪು ದೀಪ ಹಾಗೂ ಬೀಪ್ ಸದ್ದು ಮತದಾನವಾಗಿರುವದನ್ನು ಖಚಿತಪಡಿಸುತ್ತದೆ. ಬಳಿಕ ಪಕ್ಕದಲ್ಲಿರುವ ವಿ.ವಿ.ಪ್ಯಾಟಯಂತ್ರದಲ್ಲಿ ತಾವು ಮತ ಚಲಾಯಿಸಿದ ಅಭ್ಯರ್ಥಿಯ ಕ್ರಮ ಸಂಖ್ಯೆ, ಹೆಸರು ಹಾಗೂ ಚಿಹ್ನೆಯನ್ನು ಒಳಗೊಂಡಿರುವ ಚೀಟಿಯನ್ನು ಏಳು ಸೆಕೆಂಡವರೆಗೆ ಮತದಾರ ನೋಡಿ ಮತದಾನವನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ವಿಧ್ಯುನ್ಮಾನ ಮತಯಂತ್ರದ ಮೂಲಕ ಮತ ಚಲಾಯಿಸಲು ಅನುಕೂಲವಾಗುತ್ತಿದೆ ಎಂದರು. ವಿದ್ಯುನ್ಮಾನ ಮತಯಂತ್ರದ ಬಳಕೆಯ ಪ್ರತಿ ಹಂತಗಳನ್ನು ವಿವರಿಸಿ ಪ್ರಾತ್ಯಕ್ಷಿಕೆಯನ್ನು ಸಾದರ ಪಡಿಸಿದರು. ಮತ ಯಂತ್ರ, ಕಂಟ್ರೋಲಿಂಗ ಯುನಿಟ ಹಾಗೂ ವಿ.ವಿ.ಪ್ಯಾಟಗಳ ಕಾರ್ಯ ಹಾಗೂ ಮತ ಚಲಾಯಿಸುವ ಪ್ರಕ್ರಿಯೆಯನ್ನು ವಕೀಲರು, ಪಕ್ಷಗಾರರು, ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಮತದಾರರೆಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಹಂತ ಹಂತವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ರೋಣ ಪುರಸಭೆ ವ್ಯವಸ್ಥಾಪಕರಾದ ಚಂದ್ರಕಾಂತ, ಬಸವರಾಜ ರಂಗಣ್ಣವರ್, ಹನುಮಂತ ಹಾದಿಮನಿ, ವಕೀಲರು, ಪಕ್ಷಗಾರರು ಸೇರಿದಂತೆ ಸಾರ್ವಜನಿಕರು ಇದ್ದರು.