ವಿ ವಿ ಎನ್ ಶಾಲೆಯಲ್ಲಿ ಅರ್ಥಪೂರ್ಣ ಹಿಂದಿ ದಿನಾಚರಣೆ

ಕಲಬುರಗಿ.ಸೆ.14:ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ವಿದ್ಯಾರ್ಥಿಗಳು ಪೈಪೋಟಿಗಿಳಿಯಬೇಕಾದರೆ ಮಾತೃ ಭಾಷೆಯ ಜೊತೆಗೆ ರಾಷ್ಟ್ರ ಭಾಷೆ ಹಿಂದಿ ಹಾಗೂ ಅಂತಾರಾಷ್ಟ್ರೀಯ ಭಾಷೆ ಇಂಗ್ಲಿಷ್ ತಿಳಿದಿರಬೇಕು. ಇತರ ಭಾಷೆಗಳನ್ನು ಕಲಿಯುವುದು ತಪ್ಪಲ್ಲ ಎಂದು ಸಿದ್ದಪ್ಪ ಭಗವತಿ ಹೇಳಿದರು.
ನಗರದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಆಯೋಜಿಸಿದ ರಾಷ್ಟ್ರೀಯ ಹಿಂದಿ ದಿವಸ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲೆಯ ಪ್ರಿನ್ಸಿಪಾಲ್ ಸಿದ್ದಪ್ಪ ಭಗವತಿ ಹಿಂದಿ ಸಾಹಿತಿ ಮುನ್ಷಿ ಪ್ರೇಮಚಂದ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಕ್ಕಳನ್ನುದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳಾದ ಸೌಮ್ಯ, ಅರ್ಪಿತಾ, ಸುರಭಿ ರಾಷ್ಟ್ರೀಯ ಭಾಷೆ ಹಿಂದಿಯ ಕುರಿತು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು. ಹಿಂದಿ ಶಿಕ್ಷಕರಾದ ಮಧುಮತಿ ಹಾಗೂ ಭಾರತಿ ಮಾತನಾಡಿ, ಹಿಂದಿ ನಮ್ಮ ರಾಷ್ಟ್ರ ಭಾಷೆ ಹಾಗೂ ಸರಳ ಭಾಷೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದಿ ಭಾಷೆಯ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದೆ. ಅತ್ಯಂತ ಗರಿಷ್ಟ ಸಂಖ್ಯೆಯ ಜ್ಞಾನಪೀಠ ಪ್ರಶಸ್ತಿಯನ್ನು ಹೊಂದಿದೆ ಎಂದು ಹಿಂದಿ ವಿಭಾಗದ ಮುಖ್ಯಸ್ಥೆ ಶೋಭಾ ಜವಳಿ ಹೇಳಿದರು.
ಶಾಲೆಯ ಉಪ ಪ್ರಾಚಾರ್ಯ ಪ್ರಸಾದ ಜಿ.ಕೆ ಮಕ್ಕಳಿಗಾಗಿ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿದರು.
ವಿದ್ಯಾರ್ಥಿಗಳಾದ ಕುಮಾರಿ ಗೌರಿ ಸ್ವಾಗತಿಸಿದರು. ಅಭಿಷೇಕ್ ವಂದಿಸಿದರು . ಸೂರ್ಯಮಿತ್ರ ನಿರೂಪಿಸಿದರು . ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.