ವಿ.ಪ. ಪಶ್ಚಿಮ ಪದವೀಧರ ಕ್ಷೇತ್ರ: ಇಂದು ಅಭ್ಯರ್ಥಿಗಳ ಭವಿಷ್ಯ

ಧಾರವಾಡ, ನ.10-ಕಳೆದ ಅಕ್ಟೋಬರ್ 28 ರಂದು ಮತದಾನ ನಡೆದಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಮತ ಎಣಿಕೆ ಕಾರ್ಯ ಇಂದು ನಗರದ ಕೃಷಿ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದಲ್ಲಿ ಪ್ರಾರಂಭವಾಗಿದ್ದು ಇಂದು ಸಂಜೆಯ ವೇಳೆಗೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಬೆಳಿಗ್ಗೆ 7.55 ಕ್ಕೆ ಮತಪೆಟ್ಟಿಗೆಗಳನ್ನು ಇರಿಸಿದ್ದ ಭದ್ರತಾ ಕೊಠಡಿಗಳನ್ನು ಅಭ್ಯರ್ಥಿಗಳು, ಅಧಿಕೃತ ಏಜೆಂಟರುಗಳ ಸಮ್ಮುಖದಲ್ಲಿ ತೆರೆಯಲಾಯಿತು. ಒಟ್ಟು 11 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.ಒಂದು ಅಂಚೆ ಮತ ಸೇರಿ 52068 ಮತಗಳು ಚಲಾವಣೆಯಾಗಿವೆ. ಎರಡು ಕೊಠಡಿಗಳ 14 ಟೇಬಲ್ಲುಗಳಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭವಾಯಿತು.
ಚುನಾವಣಾ ವೀಕ್ಷಕರಾಗಿರುವ ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್, ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಮತ್ತಿತರರು ಮತ ಎಣಿಕೆ ಕೇಂದ್ರದಲ್ಲಿ ಹಾಜರಿದ್ದರು.
ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೆತ್ರವೂ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದ್ದು, ಒಟ್ಟು 74,268 ನೋಂದಾಯಿತ ಮತದಾರರನ್ನು ಹೊಂದಿದೆ. ಈ ಪೈಕಿ ಅಕ್ಟೋಬರ್ 28 ರಂದು ಜರುಗಿದ ಚುನಾವಣೆಯಲ್ಲಿ 35,660 ಪುರುಷ, 16,406 ಮಹಿಳೆಯರು ಮತ್ತು ಇತರೆ ಒಂದು ಹಾಗೂ ಒಂದು ಅಂಚೆ ಮತಪತ್ರ ಸೇರಿದಂತೆ ಒಟ್ಟು 52,068 ಜನ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಒಟ್ಟು ಶೇ. 70.11 ಪ್ರಮಾಣದಲ್ಲಿ ಮತದಾನವಾಗಿದ್ದು, ಇಂದು ಅಭ್ಯರ್ಥಿಗಳ ಭವಿಷ್ಯ ನಿರ್ಣಯವಾಗಲಿದೆ.
ಬಿಜೆಪಿ ಪಕ್ಷದಿಂದ ಎಸ್.ವಿ. ಸಂಕನೂರ, ಕಾಂಗ್ರೆಸ್‍ದಿಂದ ಡಾ. ಆರ್.ಎಮ್. ಕುಬೇರಪ್ಪ, ಜೆಡಿಎಸ್‍ನಿಂದ ಶಿವಶಂಕರ ಕಲ್ಲೂರ, ಶಿವಸೇನಾದಿಂದ ಸೋಮಶೇಖರ ಉಮರಾಣಿ, ಕರ್ನಾಟಕ ರಾಷ್ಟ್ರ ಸಮೀತಿ ಪಕ್ಷದಿಂದ ಶಿವರಾಜ ಕಾಂಬಳೆ, ಪಕ್ಷೇತರ ಅಭ್ಯರ್ಥಿಗಳಾದ ಬಸವರಾಜ ಗುರಿಕಾರ, ದಶರಥ ರಂಗರೆಡ್ಡಿ, ಬಿ.ಡಿ. ಹಿರೇಗೌಡರ, ಬಸವರಾಜ ತೇರದಾಳ, ಮೊಹಮ್ಮದ ನಾಗರಕಟ್ಟಿ, ಶಿವಕುಮಾರ ತಳವಾರ ಈ 11 ಜನ ಅಭ್ಯರ್ಥಿಗಳು ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಕಣದಲ್ಲಿದ್ದಾರೆ. ಇಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.
ಕೋವಿಡ್ ಮುಂಜಾಗ್ರತಾ ಕ್ರಮ:
ಮತ ಎಣಿಕೆ ಕೇಂದ್ರದಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ ಎಣಿಕೆ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿಗಳು, ಸಿಬ್ಬಂದಿ ಪ್ರವೇಶಕ್ಕೆ ಒಂದು ದ್ವಾರ, ಅಭ್ಯರ್ಥಿಗಳು, ಅಧಿಕೃತ ಏಜೆಂಟರು, ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ಮತ್ತೊಂದು ಬದಿಯ ದ್ವಾರವನ್ನು ನಿಗದಿಪಡಿಸಲಾಗಿದೆ.
ಎರಡೂ ಕಡೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಿ ಪ್ರವೇಶ ಕಲ್ಪಿಸಲಾಗಿತ್ತು. ಪ್ರತ್ಯೇಕ ಆರೋಗ್ಯ ಕೊಠಡಿಗಳನ್ನೂ ಕೂಡ ಸ್ಥಾಪಿಸಲಾಗಿದೆ. ವೈರಾಣು ಮುಕ್ತಗೊಳಿಸಲು ಮತ ಎಣಿಕೆ ಕೊಠಡಿಗಳಲ್ಲಿ ಯುವಿ ಕಿರಣಗಳನ್ನು ಅಳವಡಿಸಲಾಗಿದೆ.