ವಿ.ಪ ಚುನಾವಣೆ: ಜಾಹೀರಾತು ಪ್ರಕಟಣೆಗೆ ಪೂರ್ವಾನುಮತಿ ಕಡ್ಡಾಯ

ಧಾರವಾಡ, ನ.26: ಕರ್ನಾಟಕ ವಿಧಾನ ಪರಿಷತ್ತಿನ ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಯಾವುದೇ ಮಾಧ್ಯಮ, ಅಧಿಕೃತ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳುವ ಮುನ್ನ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ (ಎಂಸಿಎಂಸಿ)ಯಿಂದ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಮತದಾರರ ಮೇಲೆ ಪ್ರಭಾವ ಬೀರುವಂತಹ ಪೇಡ್ ನ್ಯೂಸ್ ಪ್ರಕಟಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಎಂಸಿಎಂಸಿ ಸಮಿತಿಯ ಅಧ್ಯಕ್ಷರೂ ಆಗಿರುವ ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ ಹೇಳಿದರು.
ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಲೆಕ್ಟ್ರಾನಿಕ್ ಮಾಧ್ಯಮಗಳು, ಮುದ್ರಣ ಮಾಧ್ಯಮಗಳ ಇ-ಪೇಪರ್, ಬಲ್ಕ್ ಎಸ್‍ಎಂಎಸ್, ಧ್ವನಿ ಸಂದೇಶಗಳು ಹಾಗೂ ಅಫಿಡವಿಟ್‍ನಲ್ಲಿ ಘೋಷಿಸಿದ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕೈಗೊಳ್ಳುವ ಮುನ್ನ ಅವುಗಳ ಇಲೆಕ್ಟ್ರಾನಿಕ್ ಪ್ರತಿ, ಜಾಹೀರಾತಿನ ಕರಡುಪ್ರತಿಗಳನ್ನು ನಿಗದಿತ ಅನೆಕ್ಸರ್ ‘ಎ’ ದೊಂದಿಗೆ ಜಿಲ್ಲಾ ಎಂಸಿಎಂಸಿ ಸಮಿತಿಗೆ ಸಲ್ಲಿಸಬೇಕು. ಸಮಿತಿಯು 48 ಗಂಟೆಗಳ ಅವಧಿಯೊಳಗೆ ಅವುಗಳನ್ನು ಪರಿಶೀಲಿಸಿ ಸೂಕ್ತವೆನಿಸಿದ ಜಾಹೀರಾತುಗಳಿಗೆ ಅನೆಕ್ಸರ್ ‘ಬಿ’ ದಲ್ಲಿ ಪೂರ್ವಾನುಮತಿ ಪ್ರಮಾಣ ಪತ್ರವನ್ನು ನೀಡುತ್ತದೆ. ಮಾಧ್ಯಮಗಳು ಅನೆಕ್ಸರ್ ‘ಬಿ’ ದಲ್ಲಿ ಪೂರ್ವಾನುಮತಿ ಪ್ರಮಾಣ ಪತ್ರವನ್ನು ಅಭ್ಯರ್ಥಿಗಳಿಂದ ಪಡೆದ ಬಳಿಕವೇ ಜಾಹೀರಾತು ಪ್ರಕಟಿಸಬೇಕು ಎಂದು ಹೇಳಿದರು.
ಜಾಹೀರಾತಿನಲ್ಲಿ ನೆರೆಯ ರಾಷ್ಟ್ರಗಳನ್ನು ಟೀಕಿಸುವ, ಧಾರ್ಮಿಕ ಅಥವಾ ಸಮುದಾಯಗಳ ಮೇಲೆ ಅವಹೇಳನ ಮಾಡುವ, ಮಾನಹಾನಿಗೆ ಕಾರಣವಾಗುವ, ಹಿಂಸೆಗೆ ಪ್ರಚೋದನೆ ನೀಡುವ, ನ್ಯಾಯಾಂಗ ನಿಂದನೆಗೆ ಕಾರಣವಾಗುವ, ದೇಶದ ಸಾರ್ವಭೌಮತೆ, ಐಕ್ಯತೆ ಹಾಗೂ ಸಮಗ್ರತೆಗೆ ಧಕ್ಕೆತರುವ ಅಂಶಗಳು ಇರಬಾರದು. ನಾಮಪತ್ರ ಸಲ್ಲಿಸಿದ ದಿನದಿಂದ ಯಾವುದೇ ಅಭ್ಯರ್ಥಿ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಪೇಡ್‍ನ್ಯೂಸ್ ಎಂದು ಕಂಡುಬಂದರೆ ಜಿಲ್ಲಾ ಎಂಸಿಎಂಸಿ ಸಮಿತಿಯು ಪರಿಶೀಲಿಸಿ, ಪ್ರಜಾಪ್ರತಿನಿಧಿ ಕಾಯ್ದೆ 1951 ಸೆಕ್ಷನ್ 77(1)ರಡಿ 96 ಗಂಟೆಯೊಳಗೆ ಚುನಾವಣಾಧಿಕಾರಿಗಳ ಮೂಲಕ ನೋಟಿಸ್ ಜಾರಿ ಮಾಡಲಾಗುವುದು. ಅಭ್ಯರ್ಥಿಯು ನೋಟಿಸ್ ಸ್ವೀಕರಿಸಿದ 48 ಗಂಟೆಗಳ ಒಳಗೆ ಉತ್ತರ ನೀಡಬೇಕು. ಪೇಡ್‍ನ್ಯೂಸ್‍ನ ವೆಚ್ಚವನ್ನು ನಿಯಮಾನುಸಾರ ಅಭ್ಯರ್ಥಿಗಳ ವೆಚ್ಚ ಖಾತೆಗೆ ಸೇರಿಸಲು ಶಿಫಾರಸ್ಸು ಮಾಡಲಾಗುವುದು ಎಂದು ಸೂಚಿಸಿದರು.
ಸಮಿತಿಯ ಸದಸ್ಯ, ಮಹಾನಗರ ಪಾಲಿಕೆ ಜಂಟಿ ಆಯುಕ್ತ ಅಜೀಜ್ ದೇಸಾಯಿ ಮಾತನಾಡಿ, ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಣೆ ಮುನ್ನ ಎಂಸಿಎಂಸಿ ಸಮಿತಿಯನ್ನು ಸಂಪರ್ಕಿಸಬೇಕು ಎಂದರು. ಸಭೆಯಲ್ಲಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
.