ವಿ.ಜಿ.ಕುಲಕರ್ಣಿ ಆಸ್ಪತ್ರೆ : ನಿಯಮ ಉಲ್ಲಂಘನೆ – ಸಿಎಂಸಿ ನೋಟೀಸ್


ರಾಯಚೂರು.ಮಾ.19- ನಗರದ ವಾರ್ಡ್ ನಂ.4 ರ ಅಜಾದ್ ನಗರದಲ್ಲಿರುವ ವಿ.ಜಿ.ಕುಲಕರ್ಣಿ ಆಸ್ಪತ್ರೆ ನಿಯಮ ಉಲ್ಲಂಘನೆಗೆ ಸಂಬಂಧಿಸಿ ನಗರಸಭೆ ಪೌರಾಯುಕ್ತರು ಎರಡನೇ ಸೂಚನಾ ಪತ್ರವನ್ನು ನೀಡಿದ್ದಾರೆ. ಪ್ರೀತಂ ಸಿಂಗ್ ಅವರ ದೂರಿನ ಹಿನ್ನೆಲೆಯಲ್ಲಿ ಪೌರಾಯುಕ್ತರು ನೋಟೀಸ್ ಜಾರಿ ಮಾಡಿದ್ದಾರೆ.
ವಸತಿ ವಲಯದಲ್ಲಿ ಅನಧಿಕೃತವಾಗಿ ನಿಯಮಾವಳಿ ಪ್ರಕಾರ ಸೆಟ್ ಬ್ಯಾಕ್ ಬಿಡದೇ ಹಾಗೂ ಕಟ್ಟಡ ಶೇಕಡವಾರು ಆವರಿಸುವಿಕೆ ಮತ್ತು ನೆಲ ವಿಸ್ತರಣಾ ಪ್ರಮಾಣ ಪಾಲಿಸದೇ, ಕಟ್ಟಡ ನಿರ್ಮಿಸಲಾಗಿದೆ. 6 ಅಂತಸ್ತಿನ ಕಟ್ಟಡವನ್ನು ಕಟ್ಟಬೇಕಾದರೇ, ಕನಿಷ್ಟ 60 ಅಡಿ ರಸ್ತೆ ನಿಯಮಾನುಸಾರ ಇರಬೇಕು. ಹಾಗೂ ಈ ನಿಯಮ ಉಲ್ಲಂಘನೆ ಮಾಡಿ, ಕಟ್ಟಡ ನಿರ್ಮಿಸಲಾಗಿದೆಂದು ಆಸ್ಪತ್ರೆಗೆ ನೋಟೀಸ್ ನೀಡಲಾಗಿದೆ. ಜಿಲ್ಲಾ ನಗರಾಭಿವೃದ್ಧಿ ಕೋಶ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ 27-1-2021 ರಂದು ಪತ್ರ ಬರೆದು ಅನಧಿಕೃತವಾಗಿ ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಸಂಬಂಧಿಸಿ, ಪರಿಶೀಲನೆ ಮಾಡಲು ಸೂಚಿಸಿದ್ದಾರೆ.
ಕಾರಣ ಸೂಚನಾ ಪತ್ರ ಜಾರಿಗೊಳಿಸಿ, ಸದರಿ ಕಟ್ಟಡ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗಿತ್ತು. ಆದರೆ, ಇದುವರೆಗೂ ನಿಮ್ಮಂದ ಕಟ್ಟಡ ಸಂಬಂಧ ದಾಖಲೆಗಳನ್ನು ಸಲ್ಲಿಸಲಾಗಿಲ್ಲ. ಕಾರಣ ಎರಡನೇ ಸೂಚನಾ ಪತ್ರ ಮುಟ್ಟಿದ ಮೂರು ದಿನಗಳೊಳಗೆ ಸದರಿ ಕಟ್ಟಡಕ್ಕೆ ಸಂಬಂಧಿಸಿ ದಾಖಲೆಗಳನ್ನು ನೀಡುವಂತೆ ಸೂಚಿಸಿದ್ದಾರೆ. ತಪ್ಪಿದ್ದಲ್ಲಿ ಪುರಸಭೆ ಕಾಯ್ದೆಯನ್ವಯ ಕ್ರಮ ಕೈಗೊಳ್ಳುವುದಾಗಿ ನೋಟೀಸ್‌ನಲ್ಲಿ ಹೇಳಲಾಗಿದೆ. ವಿ.ಜಿ.ಕುಲಕರ್ಣಿ ಆಸ್ಪತ್ರೆ ನಿಯಮಾನುಸಾರ ನಿರ್ಮಿಸಿಲ್ಲವೆನ್ನುವ ಪೌರಾಯುಕ್ತರ ಈ ಸೂಚನಾ ಪತ್ರ ಈಗ ಗಂಭೀರ ಕ್ರಮಕ್ಕೆ ಮುಂದಾಗುವಂತಹ ಪ್ರಸಂಗ ನಿರ್ಮಿಸಿದೆ.