ವಿ.ಕೆ. ಸಲಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹ

ಕಲಬುರಗಿ,ಮೇ.27-ಕಮಲಾಪುರ ತಾಲೂಕಿನ ವಿ.ಕೆ.ಸಲಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಲಾಯಿತು.
ವಿ.ಕೆ.ಸಲಗರ ಗ್ರಾಮವು ಕಮಲಾಪುರ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿದ್ದು, ಈ ಬಾರಿ ಹೊಸ ಜಿಲ್ಲಾ ಪಂಚಾಯತ್ ಕ್ಷೇತ್ರ ಎಂದು ಘೋಷಣೆ ಆಗಿದೆ ಪ್ರತಿ ಬುಧುವಾರ ಇಲ್ಲಿ ದೊಡ್ಡ ಪ್ರಮಾಣದ ಸಂತೆ ನಡೆಯುತ್ತದೆ ಬೆಳಮಗಿ, ಬೆಳಮಗಿ ತಾಂಡ , ಕರಹರಿ, ಕಮಲಾನಗರ , ವಿ.ಕೆ.ಸಲಗರ ತಾಂಡ, ಲೇಂಗಟಿ, ಮುದ್ದುಡಗಾ, ಮುರಡಿ, ಮಡಕಿ, ಮಡಕಿ ತಾಂಡ, ಮುಗಳಿ,ಮುಗಳಿ ತಾಂಡ, ಬಸವಕಲ್ಯಾಣ ತಾಲೂಕಿನ ಕೊಳ್ಳುರೆ ಗ್ರಾಮಗಳಿಗೆ ಸಂಪರ್ಕ ಕೇಂದ್ರವಾಗಿದೆ. ಇಲ್ಲಿಯ ಆರೋಗ್ಯ ಕೇಂದ್ರವು ಈ ಗ್ರಾಮಗಳ ಜನರಿಗೆ ಆರೋಗ್ಯ ಸೇವೆ ಒದಗಿಸಬೇಕಿತ್ತು. ಆದರೆ ಕೋವಿಡ್ 19 ಮಹಾಮಾರಿ ಎರಡನೇ ಅಲೆ ಹೋಗಿ ಮೂರನೇ ಅಲೆ ಬರುತ್ತಿದ್ದರು ಈ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಉಪಚರಿಸಲು ಸಾಧ್ಯವಾಗದಷ್ಟು ರೋಗ್ರಸ್ತವಾಗಿದೆ. ಈ ಕೇಂದ್ರದಲ್ಲಿ ಒಂದು ತಿಂಗಳಿಂದ ಕೋವಿಡ್ ಸಂಬಂಧಿಸಿದ ಔಷಧಿಗಳಿಲ್ಲ, ಪ್ರತಿ ದಿನ ವೈದ್ಯರು ಬರುದಿಲ್ಲ , ತುರ್ತು ಸೇವೆಗೆ ಅಬುಲೆನ್ಸ್ ಇಲ್ಲ, ಕಳೆದ ಆರು ತಿಂಗಳಿನಿಂದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲ , ವಿದ್ಯುತ್ ಸಂಪರ್ಕ ವ್ಯವಸ್ಥೆ ಸರಿಯಾಗಿಲ್ಲ , ಗರ್ಭಿಣಿಯರಿಗೆ ಹೆರಿಗೆ ಮಾಡಿಸುವ ಸಲಕರಣೆಗಳು ಇಲ್ಲ, ಕೋವಿಡ್ ಸಮಯದಲ್ಲಿ ಆಕ್ಸಿಜನ್ ವ್ಯವಸ್ಥೆ ಇರಬೇಕು ಅಂತ ಸರ್ಕಾರ ಹೇಳುತ್ತದೆ ಆದರೆ ಇಲ್ಲಿಯವರೆಗೆ ಆಕ್ಸಿಜನ್ ವ್ಯವಸ್ಥೆ ಮಾಡಿಲ್ಲ. 30 ವರ್ಷದ ಹಿಂದೆ ನಾಲ್ಕು ಎಕರೆ ಜಾಗದಲ್ಲಿ ವೈದ್ಯರ ಕೋಣೆ, ಶಸ್ತ್ರ ಚಿಕಿತ್ಸಾ ಕೋಣೆ, ಎಂಟು ಬೆಡ್ಡಿನ ವಾರ್ಡ ರೂಮ್, ವೈದ್ಯರಿಗೆ ಇರಲು ಸುಸಜ್ಜಿತ ಕ್ವಾರ್ಟಸ್,ಸಿಂಬಂದಿಗಳಿಗೆ ಇರಲು ಕ್ವಾರ್ಟಸ್ ಇದ್ದರೂ ಜನರಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಉಪಯೋಗ ಆಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಈ ಆರೋಗ್ಯ ಕೇಂದ್ರಕ್ಕೆ ಕೂಡಲೇ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಬೇಕು, ಆಕ್ಸಿಜನ್ ವ್ಯವಸ್ಥೆ ಮತ್ತು ವೆಂಟಿಲೇಟರ್ ಸೌಲಭ್ಯ ಕಲ್ಪಿಸಬೇಕು, ವೈದ್ಯರು ಕಾರ್ಯಸ್ಥಾನದಲ್ಲಿ ಇದ್ದು ಕೆಲಸ ಮಾಡಲು ಕ್ರಮ ಕೈಗೊಳ್ಳಬೇಕು, ಕೋವಿಡ್ ತಪಾಸಣೆ ಮಾಡಿಕೊಂಡು ಬಂದರೆ ಮಾತ್ರ ಚಿಕಿತ್ಸೆ ನೀಡುತ್ತೇವೆ ಎಂಬ ಒತ್ತಾಯ ಮಾಡದೆ ಮೊದಲು ಚಿಕಿತ್ಸೆ ನೀಡಬೇಕು ಹೆಚ್ಚುವರಿಗಾಗಿ ಬೇರೆ ಆಸ್ಪತ್ರೆಗೆ ಸಿಪಾರಸ್ಸು ಮಾಡಬೇಕು, ಕೋವಿಡ್ ತಡೆಗಟ್ಟಲು ಮತ್ತು ಮೂರನೇ ಅಲೆ ಎದುರಿಸಲು ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜನರನ್ನು ಒಳಗೊಂಡ ಆರೋಗ್ಯ ವಾರಿಯರ್ಸ್ ಮೂಲಕ ಔಷಧ ವಿತರಣೆ ಮತ್ತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು, ಅಪೌಷ್ಟಿಕತೆ ಇರುವ ಮಕ್ಕಳನ್ನು ಗುರುತಿಸಿ ಪೌಷ್ಟಿಕ ಆಹಾರ ಪದಾರ್ಥಗಳನ್ನು ನೀಡಬೇಕು, ಈ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಬೇಕು, ಕೇಂದ್ರದಲ್ಲಿ ರಕ್ತ ಪರೀಕ್ಷೆ , ಸಿ. ಟಿ.ಸ್ಕ್ಯಾನಿಂಗ್ , ಎಕ್ಸರೆ ಸೇರಿದಂತೆ ಎಲ್ಲಾ ತಪಾಸಣೆ ಸೌಲಭ್ಯಗಳು ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡರಾದ ಸುನೀಲ ಮಾರುತಿ ಮಾನಪಡೆ, ಮೈಲಾರಿ ದೊಡ್ಡಮನಿ, ಶಿವಶರಣಪ್ಪ ದಮ್ಮೂರ, ವಿ.ಕೆ.ಸಲಗರ ಗ್ರಾಮ ಘಟಕದ ಅಧ್ಯಕ್ಷ ಶಿವಕುಮಾರ ಹೇರೂರ, ತಾಲ್ಲೂಕ ಮಖಂಡ ಸೋಮಶೇಖರ ಸಿಂಗೆ, ಚಿತ್ತಣ್ಣಾ ಪೂಜಾರಿ, ವೀರಭದ್ರಪ್ಪ ಮುಗಳಿ, ಅನೀಲ ಕೊಳ್ಳುರೆ, ಬೀರಪ್ಪ ಕೊಳ್ಳುರೆ, ಸುನೀಲ ಹಾಗರಗಿ, ನವಾಜಕುಮಾರ ಜಗತ್, ನಾಮದೇವ ಸಿಂಗೆ, ಲಕ್ಷ್ಮಣ ಜಗತ್ ಭಾಗವಹಿಸಿದ್ದರು.