
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.02: ಅಮೇರಿಕಾ, ಜಪಾನ್, ಬೆಲ್ಜಿಯಂ,ಇಂಗ್ಲೆಂಡ್ ಹಾಗೂ ಪೂರ್ವ ಆಫ್ರಿಕಾ ದೇಶಗಳಿಗೆ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಸೇವೆಸಲ್ಲಿಸಿ, ಇಂಗ್ಲಿಷ್ ಮತ್ತು ಕನ್ನಡ ಭಾಷೆ ಎರಡರಲ್ಲೂ ಸಮಾನ ಪ್ರಭುತ್ವ ಸಾಧಿಸಿ, ಕೃತಿ, ಕವನ, ಪ್ರವಾಸ ಕಥನ, ಕಾದಂಬರಿ ಹಾಗೂ ಲೇಖನಗಳನ್ನು ನವ್ಯ ಸಾಹಿತ್ಯ ರೂಪದಲ್ಲಿ ಬರೆದು,ನವ್ಯ ಸಾಹಿತ್ಯ ಪ್ರವರ್ಧಕರಾದವರು ವಿ.ಕೃ.ಗೋಕಾಕ್ ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ಇಂದು ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿ.ಕೃ.ಗೋಕಾಕ್ ಅವರ ಜೀವನ ಮತ್ತು ಸಾಧನೆ ಪರಿಚಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗೋಕಾಕ್ ಅವರ ಸಮುದ್ರ ಗೀತೆಗಳು, ಸಮುದ್ರದಿಂದಾಚೆಗೆ,ಸಮುದ್ರದಿಂದೀಚೆಗೆ,ದ್ಯಾವ ಪೃಥ್ವಿ, ಭಾರತ ಸಿಂಧು ರಶ್ಮಿ ಪ್ರಮುಖ ಕೃತಿಗಳಾಗಿವೆ.ಆದ್ದರಿಂದ 1990ರಲ್ಲಿ ಅವರ ಭಾರತ ಸಿಂಧು ರಶ್ಮಿ ಕೃತಿಗೆ ಐದನೇ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ವಿಶೇಷ ಎಂದರೆ ಜ್ಞಾನಪೀಠ ಪ್ರಶಸ್ತಿಯನ್ನು ದೆಹಲಿಯಲ್ಲಿ ಕೊಡುವುದು ವಾಡಿಕೆ. ಆದರೆ ಇವರಿಗೆ ಬೊಂಬಾಯಿಯಲ್ಲಿ ಕೊಟ್ಟಿರುವುದು ಎಂದರು.
ಐದನೇ ತರಗತಿಯಲ್ಲಿ ಗಣಿತ ವಿಷಯದಲ್ಲಿ ವಿಶೇಷ ಪ್ರತಿಭೆಗಳಿಸಿರುವ ಅನುಷ್ಕಾ, ಬಿಂದು, ಎನ್. ಪ್ರದೀಪ್ ಹಾಗೂ ಖುಷಿ ವಿದ್ಯಾರ್ಥಿಗಳಿಗೆ ಬಹಮಾನ ನೀಡಿ ಗೌರವಿಸಲಾಯಿತು.
ಗಣಿತ ವಿಜ್ಞಾನ ಶಿಕ್ಷಕಿ ಮುನಾವರ ಸುಲ್ತಾನ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರೆ ಚನ್ನಮ್ಮ ಪೂಜೆ ಮಾಡಿದರು. ಶಿಕ್ಷಕರಾದ ದಿಲ್ಷಾದ್ ಬೇಗಂ, ಮೋದಿನ್ ಸಾಬ್,ರಾಮಾಂಜಿನೇಯ, ಅಂಗನವಾಡಿ ಶಿಕ್ಷಕಿ ಶ್ರೀದೇವಿ ಮುಂತಾದವರು ಉಪಸ್ಥಿತರಿದ್ದರು.ವಿ.ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿ,ನಿರ್ವಹಿಸಿದರು.