ವಿ.ಎಸ್.ಕೆ. ವಿವಿ ಹೊಸ ಗುತ್ತಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಆಗ್ರಹ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.13: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಛೇರಿಯ ಆಡಳಿತ ಹಾಗೂ ನೈರ್ಮಲೀಕರಣದ ಕೆಲಸದಲ್ಲಿ 140 ಜನ ಸಿಬ್ಬಂದಿಗಳು ಸುಮಾರು 08 ರಿಂದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, 03 ವರ್ಷಗಳಿಂದ ಹೊರಗುತ್ತಿಗೆ ನೌಕರರ ವೇತನದಲ್ಲಿ ಮತ್ತು ಪಿ.ಎಫ್ ಕಡಿತದಲ್ಲಿ ತುಂಬಾ ಅನ್ಯಾಯವಾಗುತ್ತಿದ್ದು, ಕೂಡಲೇ ಸರಿಪಡಿಸಲು ಕರ್ನಾಟಕ ರಾಜ್ಯ ಡಾ|| ಬಾಬು ಜಗಜೀವನ್ ರಾಂ ಜನಜಾಗೃತಿ ವೇದಿಕೆ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಕುರಿತಂತೆ ವಿಶ್ವವಿದ್ಯಾಲಯದ ಕುಲಸಚಿವರಿಗೆ ಮನವಿ ಪತ್ರ ಸಲ್ಲಿಸಿದೆ. 02 ವರ್ಷಗಳಿಂದ ಇಂಡಸ್ ಸೆಕ್ಯೂರಿಟಿ ಸರ್ವಿಸಸ್, ಧಾರವಾಡ ಇವರ ಎಜೆನ್ಸಿಯ ಮುಖಾಂತರ ಹೊರಗುತ್ತಿಗೆ ನೌಕರರನ್ನು ಕಛೇರಿಯ ಕೆಲಸಗಳಿಗೆ ಸಿಬ್ಬಂದಿಗಳನ್ನು ಒದಗಿಸುತ್ತಿದ್ದಾರೆ. ಆದರೆ ವಿಶ್ವವಿದ್ಯಾಲಯವು ಏಜೆನ್ಸಿಗೆ ಒಬ್ಬ ಡಿ.ಇ.ಓ ನೌಕರರ ವೇತನವು ರೂ.21,497/-ಗಳು ಮತ್ತು ಒಬ್ಬ ಜವಾನ ನೌಕರ ವೇತನವು ರೂ.18,556/- ಗಳನ್ನು ಪಾವತಿಸಲಾಗುತ್ತಿದೆ. ಆದರೆ, ಗುತ್ತಿಗೆ ಪಡೆದಿರುವ ಏಜೆನ್ಸಿಯವರೇ ನೀಡುತ್ತಿರುವ ವೇತನವು ಒಬ್ಬ ಡಿ.ಇಓ ನೌಕರನಿಗೆ ರೂ.12,025/-ಗಳು ಮತ್ತು ಒಬ್ಬ ಜವಾನ ನೌಕರ ವೇತನವು ರೂ.10,305/-ಗಳನ್ನು ಪಾವತಿಸಲಾಗುತ್ತಿದೆ.
ವಿಶ್ವವಿದ್ಯಾಲಯದಿಂದ ಏಜೆನ್ಸಿಗೆ ಡಿ.ಇ.ಓ ನೌಕರರ ಮಾಸಿಕ ವೇತನದಲ್ಲಿ ಪಿ.ಎಫ್ ಹಣ ರೂ.3,853/-ಗಳು ಮತ್ತು ಜವಾನ ನೌಕರನ ಮಾಸಿಕ ವೇತನದಲ್ಲಿ ಪಿ.ಎಫ್ ಹಣ ರೂ.3,328/- ರೂಗಳು ಪಾವತಿಸಲಾಗುತ್ತಿದ್ದು, ಏಜೆನ್ಸಿಯವರು ಪಿ.ಎಫ್ ಸಂಸ್ಥೆಗೆ ಡಿ.ಇ.ಓ ನೌಕರನಿಗೆ ರೂ.1,483/-ಗಳನ್ನು ಮತ್ತು ಜವಾನ ನೌಕರನಿಗೆ ರೂ.1.538/- ಗಳನ್ನು ಪಾವತಿಸಲಾಗುತ್ತಿದೆ. ಇದರಿಂದ ಹೊರಗುತ್ತಿಗೆ ಸಿಬ್ಬಂದಿಗಳಿಗೆ ವೇತನ ತಾರತಮ್ಯವಾಗುತ್ತಿದೆ.
ಕಾರಣ ಹೊರಗುತ್ತಿಗೆ ಸಿಬ್ಬಂದಿಗಳ ವೇತನದಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ವಿಶ್ವವಿದ್ಯಾಲಯದ ಮೇಲಾಧಿಕಾರಿಗಳಿಗೆ ವಿಚಾರಿಸಿದಾಗ ಅಧಿಕಾರಿಗಳು ಸದರಿ ವಿಷಯದ ಬಗ್ಗೆ ಹಣದಲ್ಲಿ ಆಗುತ್ತಿರುವ ಅನ್ಯಾಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಹೊರಗುತ್ತಿಗೆ ಸಿಬ್ಬಂದಿಗಳಿಗೆ ನ್ಯಾಯವನ್ನು ಒದಗಿಸಿಕೊಡಲು ವಿನಂತಿಸಿಕೊಂಡಿದ್ದಾರೆ.
ಯಾವುದೇ ಸೂಕ್ತಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದ್ದಾರೆ.
ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಜಿ.ಸುಂಕಣ್ಣ ಮತ್ತಿತರಿದ್ದರು.