
ಹುಬ್ಬಳ್ಳಿ, ಆ 21: ಭಾರತ ಇಂದು ಮೆಡಿಕಲ್ ಹಬ್ ಆಗಿ ಹೊರಹೊಮ್ಮುತ್ತಿದೆ. ವೈದ್ಯಕೀಯ ಸೇವೆ, ಸೌಲಭ್ಯಗಳು ಅಭಿವೃದ್ಧಿಯಾಗುತ್ತಿವೆ. ನಮ್ಮ ವೈದ್ಯರುಗಳಿಗೆ ಹಾಗೂ ವಿಜ್ಞಾನಿಗಳಿಗೆ ಸಾಕಷ್ಟು ಸಾಮರ್ಥ್ಯವಿದ್ದು, ಅವರ ಸಾಮಥ್ರ್ಯಕ್ಕೆ ತಕ್ಕ ಸೌಲಭ್ಯಗಳನ್ನು ಸರ್ಕಾರಗಳು ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿನ ಅಕ್ಷಯ ಕಾಲೋನಿಯಲ್ಲಿ ವಿಹಾನ್ ಹಾರ್ಟ್ ಆ್ಯಂಡ್ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ವೈದ್ಯರ ಸಂಖ್ಯೆಯನ್ನೂ ಹೆಚ್ಚಿಸಬೇಕಿದೆ. ಪ್ರಜಾಪ್ರಭುತ್ವ ಶಕ್ತಿಯನ್ನು ಸೂಕ್ತವಾಗಿ ಬಳಸಿಕೊಂಡಾಗ ಜಗತ್ತಿಗೆ ಅವಶ್ಯವಿರುವ ವಸ್ತುಗಳನ್ನು ಭಾರತದಿಂದಲೇ ತಯಾರಿಸಿ ರಫ್ತು ಮಾಡಲು ಸಾಧ್ಯವಿದೆ ಎಂದರು.
ಉದ್ಯಮಿ ವಿಜಯ ಸಂಕೇಶ್ವರ ಮಾತನಾಡಿ ಹುಬ್ಬಳ್ಳಿ ವೈದ್ಯಕೀಯ ಕ್ಷೇತ್ರದಲ್ಲಿ ಜನರಿಗೆ ಜೀವನಾಡಿಯಾಗಿ ಮಾರ್ಪಾಡಾಗಿದೆ. ಸುಸಜ್ಜಿತ ಆಸ್ಪತ್ರೆಯಾಗಿ ವಿಹಾನ್ ಆಸ್ಪತ್ರೆ ನಿರ್ಮಾಣವಾಗಿದ್ದು, ನೂರು ಬೆಡ್‍ಗಳನ್ನು ಆಸ್ಪತ್ರೆಯು ಹೊಂದಿದೆ. ಸಕಲರಿಗೂ ವೈದ್ಯಕೀಯ ಸೇವೆ ನೀಡಬೇಕು ಎಂಬ ಸುದುದ್ದೇಶವನ್ನು ಆಸ್ಪತ್ರೆಯ ವೈದ್ಯರುಗಳು ಹೊಂದಿದ್ದಾರೆ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಡಿಯಾ ಸಮಸ್ಯೆ ಎದುರಾದಾಗ ಬೆಂಗಳೂರಿಗೆ ಹೋಗುವ ಅಗತ್ಯವಿತ್ತು. ಆದರೆ ಇಂದು ಉತ್ತರ ಕರ್ನಾಟಕ ಭಾಗದ ಹೆಬ್ಬಾಗಿಲಾದ ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಆಸ್ಪತ್ರೆಗಳು ತಲೆ ಎತ್ತಿವೆ. ಅದರಲ್ಲಿ ವಿಹಾನ್ ಆಸ್ಪತ್ರೆಯೂ ಒಂದಾಗಿದೆ ಎಂದರು.
ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೋಹನ ಹೆಗಡೆ, ನಾಗರಾಜ ಛಬ್ಬಿ, ಎಸ್.ಪಿ. ಶಾಸ್ತ್ರಿ, ಡಾ. ವಿಜಯಕೃಷ್ಣ ಕೋಳೂರ, ಶ್ವೇತಾ ಕೋಳೂರ, ಡಾ. ಸಚಿನ ಹೊಸಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.