ವಿಸ್ತೀರ್ಣ ಬಡಾವಣೆ : ಕುಡುಕರ ಪಾಲಿನ ಬಾರ್ – ಬಾಟಲ್ ಚೂರು ಚೂರು

ರಾಯಚೂರು.ಏ.೩೦- ಲಾಕ್ ಡೌನ್ ಹಿನ್ನೆಲೆಯಲ್ಲಿ ಹೋಟೆಲ್, ಬಾರ್ ಬಂದ್ ಕಾರಣ ಜನರು ತಮ್ಮ ಎಣ್ಣೆ ದಾಹ ತೀರಿಸಿಕೊಳ್ಳಲು ವಿಸ್ತೀರ್ಣ ಬಡಾವಣೆಗಳ ಲೇಔಟ್‌ಗಳನ್ನು ಬಾರ್‌ಗಳನ್ನಾಗಿ ಮಾರ್ಪಡಿಸಿಕೊಂಡು ಕುಡಿದು, ತಿಂದು ಅಲ್ಲಿಯೇ ಬಾಟಲ್, ಪಾರ್ಸೆಲ್ ಚೆಲ್ಲಾಪಿಲ್ಲಿ ಎಸೆದಿರುವ ಕುರುಹುಗಳು ಲೇಔಟ್‌ಗಳಲ್ಲಿ ಕಾಣಬಹುದಾಗಿದೆ.
ನಗರದ ನಾಲ್ಕು ದಿಕ್ಕಿನ ಎಲ್ಲಾ ಲೇಔಟ್‌ಗಳಲ್ಲಿ ಇದೇ ಪರಿಸ್ಥಿತಿ ಇದೆ. ಬಾರ್ ಆರಂಭವಿರುವಾಗಲೂ ವಿಸ್ತೀರ್ಣ ಬಡಾವಣೆಗಳಲ್ಲಿ ಕುಡುಕರ ಹಾವಳಿ ನಡೆಯುತ್ತಿತ್ತು. ಆದರೆ, ಲಾಕ್ ಡೌನ್‌ನ ಬಾರ್ ಬಂದ್ ಪರಿಣಾಮ ವಿಸ್ತೀರ್ಣ ಬಡಾವಣೆಯ ಖಾಲಿ ಲೇಔಟ್‌ಗಳು ಈಗ ತೆರೆದ ಬಾರ್‌ಗಳಾಗಿ ಮಾರ್ಪಟ್ಟಿವೆ. ಈ ಕುಡುಕರ ಹಾವಳಿಯಿಂದ ಲೇಔಟ್ ಅಕ್ಕಪಕ್ಕದ ನಿವಾಸಿಗಳಿಗೆ ಭಾರೀ ಕಿರುಕುಳ ಉಂಟಾಗುವಂತೆ ಮಾಡಿದೆ. ರಾತ್ರಿ ೯ ರ ನಂತರ ಲೇಔಟ್‌ಗಳಿಗೆ ದಾಳಿ ಮಾಡುವ ಈ ಪೂಡಾರಿಗಳು ತಡರಾತ್ರಿ ವರೆಗೆ ಕುಡಿದು, ತಿಂದು ಮತ್ತಿನಲ್ಲಿ ಕೇಕೆ ಕೂಗೂ ಹಾಕುತ್ತಾ, ಬಾಟಲ್‌ಗಳನ್ನು ದೂರದವರೆಗೆ ಎಸೆಯುವ ಮೂಲಕ ಅಕ್ಕಪಕ್ಕದ ಜನ ಭಯಭೀತಿಯಿಂದ ತತ್ತರಿಸುವಂತೆ ಮಾಡುತ್ತಾರೆ.
ಯಾವುದೇ ಲೇಔಟ್ ಗಳಿಗೆ ಭೇಟಿ ನೀಡಿದರೂ, ರಸ್ತೆಗಳಲ್ಲಿ ಬಾಟಲ್ ಹೊಡೆದ ಗಾಜಿನ ಚೂರುಗಳು ಚೆಲ್ಲಾಪಿಲ್ಲಿ ಹರಡಿರುತ್ತವೆ. ಮುಂಜಾನೆ ಈ ಲೇಔಟ್‌ಗಳಲ್ಲಿ ವಾಕಿಂಗ್‌ಗೆ ಹೋಗುವ ಜನ ಈ ಗಾಜುಗಳ ಮಧ್ಯೆ ಅತ್ಯಂತ ಎಚ್ಚರಿಕೆಯಿಂದ ನಡೆದಾಡುವಂತಹ ನಾಜುಕಿನ ಪರಿಸ್ಥಿತಿ ನಿರ್ಮಿಸಲಾಗುತ್ತಿದೆ. ನಗರದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗಿರುವುದು ಅದರಲ್ಲೂ ಎಂಎಸ್‌ಐಎಲ್‌ನಿಂದ ಮದ್ಯ ಖರೀದಿಸಿ, ಯಾವುದೋ ಹೋಟೆಲ್‌ನಲ್ಲಿ ಪಾರ್ಸೆಲ್ ಊಟ ಪಡೆದು, ರಾತ್ರಿ ಇಡೀ ಲೇಔಟ್‌ಗಳಲ್ಲಿ ದಾಂಧಲೆ ಮಾಡುವ ಇವರನ್ನು ನಿಯಂತ್ರಿಸುವುದು ಸವಾಲಾಗಿ ಮಾರ್ಪಟ್ಟಿದೆ. ಆದರೆ, ಜನರಿಗೆ ಮಾತ್ರ ಇವರ ಕಿರುಕುಳ ತಪ್ಪುದ ತೊಂದರೆಯಾಗಿ ಉಳಿದುಕೊಂಡಿದೆ.