ವಿಸ್ಟ್ರಾನ್ ಐಪೋನ್ ಘಟಕ ಟಾಟಾ ಗ್ರೂಪ್ ಖರೀದಿ- ಸ್ವದೇಶಿ ಐಫೋನ್ ಸಂಸ್ಥೆಯಾಗಿ ಪರಿವರ್ತನೆ

ಕೋಲಾರ, ಜ,೧೩- ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರಾಂಗಣದಲ್ಲಿರುವ ವಿಸ್ಟ್ರಾನ್‌ನ ಐಫೋನ್ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಟಾಟಾ ಗ್ರೂಪ್ ಮೂಲಗಳ ಪ್ರಕಾರ ಮಾರ್ಚ್ ಅಂತ್ಯದ ವೇಳೆಗೆ ಖರೀದಿ ಒಪ್ಪಂದ ಪೂರ್ಣಗೊಳ್ಳುವ ಸಾಧ್ಯತೆ ಇದೆ.ಈ ಒಪ್ಪಂದ ಏರ್ಪಟ್ಟಲ್ಲಿ ಟಾಟಾ ಮೊದಲ ಸ್ವದೇಶಿ ಐಫೋನ್ ತಯಾರಕ ಸಂಸ್ಥೆಯಾಗಲಿದೆ.
ಏರ್‌ಲೈನ್‌ನಿಂದ ಸಾಫ್ಟ್‌ವೇರ್‌ವರೆಗೆ, ಉಪ್ಪಿನಿಂದ ಉಕ್ಕಿನವರೆಗಿನ ಬೃಹತ್ ಉದ್ಯಮ ಸಾಮ್ರಾಜ್ಯವನ್ನು ನಡೆಸುವ ಸಂಘಟಿತ ಸಂಸ್ಥೆಯು ಘಟಕದ ಮಾಲೀಕ ಸಂಸ್ಥೆ ತೈವಾನ್ ಮೂಲದ ವಿಸ್ಟ್ರಾನ್ ಕಾರ್ಪೊರೇಷನ್‌ನೊಂದಿಗೆ ಹಲವು ತಿಂಗಳುಗಳಿಂದಲೇ ಮಾತುಕತೆ ನಡೆಸುತ್ತಿದೆ.ಆಪಲ್ ಇಂಕ್‌ನ ಐಫೋನ್‌ಗಳನ್ನು ಮುಖ್ಯವಾಗಿ ವಿಸ್ಟ್ರಾನ್ ಮತ್ತು ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್‌ನಂತಹ ತೈವಾನ್‌ನ ಉತ್ಪಾದನಾ ದೈತ್ಯರು ಜೋಡಣೆ ನಡೆಸುತ್ತಾರೆ. ಈ ಸಾಲಿಗೆ ಸೇರ್ಪಡೆಯಾಗಲು ಟಾಟಾ ಗ್ರೂಪ್ ಕೂಡ ಮುಂದಾಗಿದ್ದು, ಚೀನಾದ ಪ್ರಾಬಲ್ಯಕ್ಕೆ ಸವಾಲೊಡ್ಡುವ ಭಾರತದ ಪ್ರಯತ್ನಕ್ಕೂ ಬಲ ನೀಡಲು ಮುಂದಾಗಿದೆ. ಟಾಟಾ ಗ್ರೂಪ್ ಮಾರ್ಚ್ ೩೧ ರೊಳಗೆ ಖರೀದಿಯ ಗುರಿಯನ್ನು ಹೊಂದಿದೆ. ಇದರಿಂದಾಗಿ ಟಾಟಾ ಎಲೆಕ್ಟ್ರಾನಿಕ್ಸ್‌ಗೆ ಸರ್ಕಾರದ ಪ್ರೋತ್ಸಾಹಧನ ನೀಡುವ ಯೋಜನೆ ಸೇರಬಹುದಾಗಿದೆ. ಏಪ್ರಿಲ್ ೧ ರಿಂದ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ ಯೋಜನೆಯ ಮುಂದಿನ ಕಂತು ಪ್ರಾರಂಭವಾಗುತ್ತದೆ.
ತೈವಾನ್ ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ನಿರೀಕ್ಷಿತ ಪ್ರೋತ್ಸಾಹಧನ ಪಡೆಯುವ ಅವಶ್ಯಕತೆಗಳನ್ನು ಪೂರೈಸಿದಲ್ಲಿ ದೇಶದಲ್ಲಿರುವ ವಿಸ್ಟ್ರಾನ್‌ನ ಏಕೈಕ ಐಫೋನ್ ಉತ್ಪಾದನಾ ಘಟಕವು ೬೦೦ ಮಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೌಲ್ಯವನ್ನು ಪಡೆಯಲಿದೆ ಎನ್ನಲಾಗಿದೆ.
ಫಾಕ್ಸ್‌ಕಾನ್ ಮತ್ತು ಪೆಗಾಟ್ರಾನ್ ಕಾರ್ಪೊರೇಷನ್ ಜೊತೆಗೆ ವಿಸ್ಟ್ರಾನ್ ಕೂಡ ಒಂದಾಗಿದ್ದು, ಕಂಪನಿಯು ತನ್ನ ವ್ಯವಹಾರವನ್ನು ಐಫೋನ್ ಉತ್ಪಾದನೆಯನ್ನು ಮೀರಿ ಸರ್ವರ್‌ಗಳಂತಹ ಕ್ಷೇತ್ರಗಳಲ್ಲಿ ವೈವಿಧ್ಯಗೊಳಿಸಲು ಪ್ರಯತ್ನಿಸುತ್ತಿದೆ. ಚೀನಾದ ಘಟಕವನ್ನೂ ೨೦೨೦ರಲ್ಲಿ ಪ್ರತಿಸ್ಪರ್ಧಿ ಕಂಪನಿಗೆ ಮಾರಾಟ ಮಾಡಲು ಒಪ್ಪಿಗೆ ನೀಡಿದೆ.
ಭಾರತದಲ್ಲಿ ಐಫೋನ್ ತಯಾರಿಕೆಯಿಂದ ನಿರ್ಗಮಿಸಲು ವಿಸ್ಟ್ರಾನ್ ಯೋಚಿಸುತ್ತಿದ್ದರೂ, ಅದರ ಪ್ರತಿಸ್ಪರ್ಧಿ ತೈವಾನ್ ಕಂಪನಿಗಳು ಮಾತ್ರ ತಮ್ಮ ಐಫೋನ್ ಉತ್ಪಾದನೆಯನ್ನು ವಿಸ್ತರಿಸುತ್ತಿವೆ.
ವಿಶ್ವದ ಅತ್ಯಂತ ಲಾಭದಾಯಕ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ಆಪಲ್ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದು, ಭಾರತದತ್ತ ಹೆಚ್ಚಿನ ಗಮನವನ್ನೂ ಹರಿಸಿದೆ.
ವಿಸ್ಟ್ರಾನ್‌ನ ೨೨ ಲಕ್ಷ ಚದರ ಅಡಿ ಕಾರ್ಖಾನೆಯು ಬೆಂಗಳೂರಿನಿಂದ ೫೦ ಕಿಲೋ ಮೀಟರ್ ದೂರದಲ್ಲಿದೆ. ಸ್ವಾಧೀನಪಡಿಸಿಕೊಂಡಲ್ಲಿ ಟಾಟಾ ವಿಸ್ಟ್ರಾನ್‌ನ ಎಲ್ಲಾ ಎಂಟು ಐಫೋನ್ ಲೈನ್‌ಗಳನ್ನು ಮತ್ತು ಒಂದೆರಡು ಸಾವಿರ ಎಂಜಿನಿಯರ್‌ಗಳು ಸೇರಿದಂತೆ ಘಟಕದ ೧೦,ಸಾವಿರ ಕಾರ್ಮಿಕರನ್ನೂ ತಮ್ಮ ಸಂಸ್ಥೆಯಲ್ಲಿಯೇ ಮುಂದುವರೆಸಲಿದೆ. ವಿಸ್ಟ್ರಾನ್ ಭಾರತದಲ್ಲಿ ಐಫೋನ್‌ಗಳ ಸೇವಾ ಪಾಲುದಾರ ಸಂಸ್ಥೆಯಾಗಿ ಸ್ಥಿರವಾಗಿರಲಿದೆ.ಬೆಂಗಳೂರಿನ ಬಳಿಯ ಹೊಸೂರಿನ ತನ್ನ ಕಾರ್ಖಾನೆಯಲ್ಲಿ ನೇಮಕಾತಿಯನ್ನು ಹೆಚ್ಚಿಸಿದೆ. ಐಫೋನ್‌ಗೆ ಬೇಕಾದ ಬಿಡಿಭಾಗಗಳನ್ನು ತಯಾರಿಸುತ್ತದೆ. ನೂರಾರು ಎಕರೆಯಲ್ಲಿರುವ ಈ ಘಟಕದಲ್ಲಿ ಟಾಟಾ ಮುಂಬರುವ ವರ್ಷಗಳಲ್ಲಿ ಐಫೋನ್ ಉತ್ಪಾದನೆಯನ್ನೂ ಆರಂಭಿಸಬಹುದು.