ವಿಷ ಸೇವಿಸಿ ರಿಕ್ಷಾ ಚಾಲಕ ಆತ್ಮಹತ್ಯೆ

ಪಡುಬಿದ್ರಿ, ಅ.೩೦- ಕೊರೊನಾ ಕಾರಣದಿಂದ ದುಡಿಮೆ ಇಲ್ಲದೆ ಸಾಲವನ್ನು ಮರುಪಾವತಿಸಲು ಆಗದೆ ಚಿಂತೆಯಲ್ಲಿ ಮನನೊಂದು ಆಟೋ ಚಾಲಕರೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕನನ್ನು ನಡ್ಸಾಲು ಗ್ರಾಮದ ಪಡುಬಿದ್ರಿ ನಿವಾಸಿ ಎಮ್ ಸತೀಶ್ ಪೂಜಾರಿ (೫೮) ಎಂದು ಗುರುತಿಸಲಾಗಿದೆ. ಎಮ್.ಸತೀಶ್ ಅವರು ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಸ್ವಂತ ರಿಕ್ಷಾ ಹೊಂದಲು ಹಾಗೂ ಇವರಿಗೆ ಹುಷಾರಿಲ್ಲದ ಕಾರಣ ಚಿಕಿತ್ಸೆ ಬಗ್ಗೆ ಬೇರೆ ಬೇರೆ ಕಡೆಯಿಂದ ಸಾಲವನ್ನು ಪಡೆದಿದ್ದರು. ಕೊರೊನಾ ಹಿನ್ನಲೆ ದುಡಿಮೆ ಇಲ್ಲದೆ ಇದ್ದು ಸಾಲವನ್ನು ಮರು ಪಾವತಿಸಲು ಆಗದ ಚಿಂತೆಯಲ್ಲಿ ಮನನೊಂದು ಅ.೨೭ರ ಮಂಗಳವಾರದಂದು ಸುಮಾರು ೧೧.೦೦ ಗಂಟೆ ಸಮಯಕ್ಕೆ ಪಡುಬಿದ್ರಿ ಕಾಮತ್ ಪೆಟ್ರೋಲ್ ಬಂಕ್ ಬಳಿ ವಿಷ ಸೇವಿಸಿದ್ದರು. ಬಳಿಕ ವಿಷ ಸೇವಿಸಿರುವ ಬಗ್ಗೆ ರಿಕ್ಷಾ ಚಾಲಕ ವೆಂಕಟೇಶ್ ಎಂಬವರಿಗೆ ಕರೆ ಮಾಡಿ ತಿಳಿಸಿದ್ದು, ಅದರಂತೆ ರಿಕ್ಷಾ ಚಾಲಕ ವೆಂಕಟೇಶ್‌ರವರು ಈ ವಿಚಾರವನ್ನು ಸತೀಶ್ ಅವರ ಮಗ ಸನತ್ ಕುಮಾರ್ ಅವರಿಗೆ ತಿಳಿಸಿ ಅವರಿಬ್ಬರೂ ಸತೀಶ್ ಪೂಜಾರಿ ಅವರನ್ನು ಚಿಕಿತ್ಸೆಗೆಂದು ಉಡುಪಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೇ ಅ.೨೯ರ ಗುರುವಾರ ಮೃತಪಟ್ಟಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.