ವಿಷ ಪದಾರ್ಥ ಸೇವಿಸಿದ್ದ ಗ್ರಾ.ಪಂ. ಅಭ್ಯರ್ಥಿ ಮೃತ್ಯು

ಬಂಟ್ವಾಳ, ಡಿ.೨೯- ವಿಷ ಪದಾರ್ಥ ಸೇವಿಸಿದ್ದ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾ.ಪಂ.ನ ನಿಕಟಪೂರ್ವ ಸದಸ್ಯ
ಹಾಗೂ ಹಾಲಿ ಅಭ್ಯರ್ಥಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.
ಕಾವಳಮುಡೂರು ಗ್ರಾಮದ, ಅರ್ಗತ್ಯಾರು ನಿವಾಸಿ ಜಯಂತ ಪ್ರಭು(೫೮) ಮೃತಪಟ್ಟವರಾಗಿದ್ದಾರೆ. ಡಿ. ೨೧ರಂದು ರಾತ್ರಿ ೧೧ ಗಂಟೆಯ ವೇಳೆ ತನ್ನ ಬಾಯಿ ಹುಣ್ಣಿಗೆಂದು ತೆಗೆದುಕೊಳ್ಳುತ್ತಿದ್ದ ಔಷಧಿಯ ಬದಲಾಗಿ ಖಾಲಿಯಾಗಿದ್ದ ಔಷಧಿ ಬಾಟಲಿಯಲ್ಲಿ ಶೇಖರಿಸಿಟ್ಟಿದ್ದ ಟ್ರೈಕಾಟ್ ಎಂಬ ಹುಲ್ಲಿಗೆ ಸಿಂಪಡಣೆ ಮಾಡುವ ಕಳೆನಾಶಕ ಔಷಧಿಯನ್ನು ಸಿರಪ್ ಎಂದು ತಪ್ಪಾಗಿ ಭಾವಿಸಿ ಅಲ್ಪ ಪ್ರಮಾಣದಲ್ಲಿ ಸೇವಿಸಿದ್ದರು. ಮರುದಿನ ಗ್ರಾ.ಪಂ. ಚುನಾವಣೆಯಲ್ಲಿ ಮತದಾನ ಮಾಡಿದ್ದರಲ್ಲದೆ ಮತಗಟ್ಟೆಯಲ್ಲೂ ಒಂದಷ್ಟು ಹೊತ್ತು ಕಳೆದಿದ್ದರು. ಬಳಿಕ ರಾತ್ರಿ ವೇಳೆಗೆ ದಿಢೀರ್ ಅಸ್ವಸ್ಥರಾಗಿದ್ದರೆನ್ನಲಾಗಿದ್ದು ತತ್‌ಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ನಂತರ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಸೋಮವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಅವರ ಪುತ್ರ ನೀಡಿರುವ ದೂರಿನಂತೆ ಪುಂಜಾಲಕಟ್ಟೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಜಯಂತ ಪ್ರಭು ಅವರು ಡಿ.೨೨ರಂದು ನಡೆದ ಗ್ರಾ.ಪಂ. ಚುನಾವಣೆಗೆ ಕಾವಳಮೂಡೂರು ಪಂಚಾಯತ್‌ನ
ವಾರ್ಡ್ ೩ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದರು. ಅವರು ಈ ಹಿಂದೆ ಎರಡು ಬಾರಿ ಸದಸ್ಯರಾಗಿದ್ದು, ಒಂದು ಬಾರಿ ಗ್ರಾ.ಪಂ. ನ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಅವರು ಸಾಮಾಜಿಕ, ಧಾರ್ಮಿಕ,
ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ನೆಲ್ಲಿಗುಡ್ಡೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ, ನೆಲ್ಲಿಗುಡ್ಡೆ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ.