
ಕಲಬುರಗಿ,ಸೆ.06:ಸಾಲ ಬಾಧೆಯಿಂದ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡ ನಗರದ ಹಿರಿಯ ಪತ್ರಕರ್ತ ಕೆ.ಎನ್. ರೆಡ್ಡಿಯವರು (57) ವಿಷ ಕುಡಿದು, ಚಾಕುವಿನಿಂದ ಇರಿದುಕೊಂಡು ಹಾಗೂ ಮಹಡಿಯ ಮೇಲಿಂದ ಕೆಳಗೆ ಜಿಗಿದು ಬರ್ಭರ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಧರಿಯಾಪೂರ್ ಜಿಡಿಎ ಲೇಔಟ್‍ನಲ್ಲಿನ ಮಹಾದೇವಪ್ಪ ರಾಂಪೂರೆ ಬಡಾವಣೆಯಲ್ಲಿ ಕಳೆದ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಸಂಜೆ 7-30ಕ್ಕೆ ಮನೆಯಿಂದ ಹೊರಹೋದ ಕೆ.ಎನ್. ರೆಡ್ಡಿಯವರು ರಾತ್ರಿಯಾದರೂ ಮರಳಿ ಮನೆಗೆ ಬಾರದೇ ಇದ್ದುದರಿಂದ ಕುಟುಂಬಸ್ಥರು ಹುಡುಕಾಟ ಆರಂಭಿಸಿದರು. ಧರಿಯಾಪುರ ಬಡಾವಣೆಯ ವಿಶ್ವ ಸೇವಾ ಭವನದ ಹತ್ತಿರ ರೆಡ್ಡಿ ಅವರ ದ್ವಿಚಕ್ರವಾಹನ ನಿಂತಿರುವುದನ್ನು ನೋಡಿ, ಅಲ್ಲಿ ಎಲ್ಲಿಯಾದರೂ ಇರಬಹುದು ಎಂದು ಹುಡುಕಾಟ ಆರಂಭಿಸಿದರು. ನಂತರ ಒಂದು ಮೂರು ಅಂತಸ್ತಿನ ಹಳೆಯ ಕಟ್ಟಡದ ಕೆಳಗೆ ಕೆ.ಎನ್. ರೆಡ್ಡಿ ಅವರ ಶವ ಪತ್ತೆಯಾಯಿತು.
ಕಾಲುಗಳಿಗೆ, ಕೈಗಳಿಗೆ, ಹೊಟ್ಟೆಗೆ ಚಾಕುವಿನಿಂದ ಕೊಯ್ದುಕೊಂಡ ಗಾಯಗಳಾಗಿದ್ದವು. ಅಟೇ ಅಲ್ಲದೇ ಕಟ್ಟಡದ ಮೇಲೆ ಹೋಗಿ ಕುಟುಂಬಸ್ಥರು ನೋಡಿದಾಗ ಒಂದು ಕೋಣೆಯಲ್ಲಿ ವಿಷದ ಬಾಟಲಿ, ಚಾಕು, ಚಪ್ಪಲಿಗಳು, ಮೊಬೈಲ್, ಚೆಸ್ಮಾ, ನೀರಿನ ಬಾಟಲಿ ಮತ್ತು ರಕ್ತದ ಕಲೆಗಳು ಕಂಡು ಬಂದವು.
ಕೆ.ಎನ್. ರೆಡ್ಡಿಯವರು ರಾಯಚೂರಿನಲ್ಲಿ ವಸತಿಯುತ ಶಾಲೆಯನ್ನು ಆರಂಭಿಸಿದ್ದು, ಸರಿಯಾಗಿ ವಿದ್ಯಾರ್ಥಿಗಳ ಪ್ರವೇಶಾತಿ ಆಗಿರಲಿಲ್ಲ. ಅಲ್ಲದೇ ಸಾಕಷ್ಟು ವೆಚ್ಚಗಳನ್ನು ಭರಿಸಲು ತುಂಬಾ ಸಾಲ ಮಾಡಿಕೊಂಡಿದ್ದರು. ಇದರಿಂದಾಗಿ ನೊಂದು ವಿಷ ಕುಡಿದಿದ್ದು, ಸಾಯದೇ ಇದ್ದಾಗ ಚಾಕುವಿನಿಂದ ಇರಿದುಕೊಂಡು, ಕಟ್ಟಡದ ಮೇಲಿಂದ ಜಿಗಿದು ಮೃತಪಟ್ಟಿದ್ದಾನೆ ಎಂದು ಮೃತನ ಸಹೋದರ ರಾಯಚೂರು ನಿವಾಸಿ ಕೆ. ಪರ್ವತರೆಡ್ಡಿ ಅವರು ದೂರು ಸಲ್ಲಿಸಿದ್ದಾರೆ.
ಕೆ.ಎನ್. ರೆಡ್ಡಿ ಅವರು ನಗರದ ಮಹಾದೇವಪ್ಪ ರಾಂಪೂರೆ ಬಡಾವಣೆಯಲ್ಲಿ ತಮ್ಮ ಸ್ವಂತ ನಿವಾಸದಲ್ಲಿ ಪತ್ನಿ ಕೆ. ಪದ್ಮಾವತಿ, ಅಣ್ಣನ ಪುತ್ರಿ ಕೆ. ಅಮೂಲ್ಯ ಅವರೊಂದಿಗೆ ವಾಸವಾಗಿದ್ದರು. ದಿ ಹಿಂದೂ, ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್ ಮುಂತಾದ ಪತ್ರಿಕೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಕೊನೆಯ ಸಂದರ್ಭದಲ್ಲಿ ಡೆಕ್ಕನ್ ಕ್ರೋನಿಕಲ್ ಇಂಗ್ಲೀಷ್ ಪತ್ರಿಕೆಯ ವರದಿಗಾರರಾಗಿದ್ದರು. ಅದೂ ಅಲ್ಲದೇ ಜೆಸ್ಕಾಂನಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾಗಿಯೂ ಕಾರ್ಯನಿರ್ವಹಿಸಿದ್ದರು. ಕಳೆದ ಏಳು ವರ್ಷಗಳಿಂದ ಪತ್ರಿಕಾ ರಂಗದಿಂದ ನಿವೃತ್ತಿ ಪಡೆದಿದ್ದರು.
ನಿವೃತ್ತಿ ಜೀವನದ ನಂತರ ರಾಯಚೂರಿನಲ್ಲಿ ಕೆ.ಎನ್. ರೆಡ್ಡಿ ಅವರು ಮಾನಸ ಗಂಗೋತ್ರಿ ಪ್ರಾಥಮಿಕ ಶಾಲೆಯನ್ನು ವಸತಿ ಸಹಿತ ಆರಂಭಿಸಿದ್ದರು. ವಿದ್ಯಾರ್ಥಿಗಳು ಸರಿಯಾಗಿ ನೊಂದಣಿ ಆಗದೇ ಇದ್ದುದರಿಂದ ಸಾಲಭಾಧೆ ಹೆಚ್ಚಾಗಿ ಶಾಲೆಯನ್ನು ಸ್ಥಗಿತಗೊಳಿಸಿ ಮರಳಿ ನಗರಕ್ಕೆ ಆಗಮಿಸಿದ್ದರು. ಶಾಲೆ ಸರಿಯಾಗಿ ನಡೆಯದೇ ಇದ್ದುದರಿಂದ ಸಾಲ ಬಾಧೆಗೆ ಒಳಗಾಗಿ ಜೀವನದಲ್ಲಿ ನೊಂದು ಚಿಂತೆಗೆ ಒಳಗಾಗಿದ್ದರು. ಯಾರಿಗಾದರೂ ಶಾಲೆಯನ್ನು ನಿರ್ವಹಿಸಲು ಕೊಡೋಣ ಎಂಬ ನಿರ್ಧಾರಕ್ಕೂ ಬಂದಿದ್ದರು. ಆದಾಗ್ಯೂ, ಅವರು ಕಳೆದ ಮಂಗಳವಾರ ರಾತ್ರಿ ಮನೆಯಿಂದ ಹೊರಹೋಗಿ ಆತ್ಮಹತ್ಯೆ ಮಾಡಿಕೊಂಡರು ಎಂದು ಸಹೋದರ ತಿಳಿಸಿದ್ದು, ಈ ಕುರಿತು ವಿಶ್ವವಿದ್ಯಾಲಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ರಕರ್ತ ಕೆ.ಎನ್. ರೆಡ್ಡಿ ಅವರು ಪರಿಸರದ ಕಾಳಜಿ ಹೊಂದಿದ್ದರು. ತಮ್ಮ ಬಡಾವಣೆಯಲ್ಲಿ ಸಾವಿರಾರು ಗಿಡಗಳನ್ನು ಬೆಳೆಸಿದ್ದರು. ಬೇಸಿಗೆಯಲ್ಲಿ ಗಿಡಗಳಿಗೆ ತಮ್ಮ ಸ್ವಂತ ವೆಚ್ಚದಲ್ಲಿ ಟ್ಯಾಂಕರ್ ಮೂಲಕ ನೀರು ಹಾಕಿಸುತ್ತಿದ್ದರು. ಮಾಜಿ ಮುಖ್ಯಮಂತ್ರಿ ದಿ. ಜೆ.ಎಚ್. ಪಟೇಲ್ ಅವರ ಕುರಿತು ಹಾಗೂ ಖ್ಯಾತ ಕಲಾವಿದ ನರಸಿಂಹಲು ವಡವಾಟಿ ಅವರ ಕುರಿತು ಕೃತಿಗಳನ್ನೂ ಸಹ ಬರೆದಿದ್ದರು. ಅವರ ಬರ್ಬರ ಹತ್ಯೆ ಪತ್ರಕರ್ತರ ಸಮುದಾಯಕ್ಕೆ ಆಘಾತವನ್ನು ನೀಡಿತು. ಬುಧವಾರ ಸಂಜೆ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಗರದ ನೆಹರೂ ಗಂಜ್‍ನ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು.
ಶೃದ್ಧಾಂಜಲಿ; ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೆ.ಎನ್. ರೆಡ್ಡಿ ಅವರ ನಿಧನಕ್ಕೆ ಶೃದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಹಿರಿಯ ಪತ್ರಕರ್ತರಾದ ಡಾ. ಶ್ರೀನಿವಾಸ್ ಸಿರನೂರಕರ್, ಸಿವಾನಂದನ್, ಮೌನೇಶ್, ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ಡಾ. ಶಿವರಂಜನ್ ಸತ್ಯಂಪೇಟೆ, ಚಂದ್ರಕಾಂತ್ ಹಾವನೂರ್, ದೇವೆಂದ್ರಪ್ಪ ಅವಂಟಿ, ಸುಭಾಷ್ ಬಣಗಾರ್, ಭೀಮಾಶಂಕರ್ ಫಿರೋಜಾಬಾದ್, ಎಂ.ಎಸ್. ಪಾಟೀಲ್ ನರಿಬೋಳ್, ಮಹಿಪಾಲರೆಡ್ಡಿ ಮುನ್ನೂರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.