ವಿಷಾಹಾರ ಸೇವಿಸಿ 24 ಕುರಿಗಳ ಸಾವು

ಹೂವಿನಹಡಗಲಿ ನ 18: ತಾಲೂಕಿನ ಹೊಳಗುಂದಿಯ ಅಡವಿಯಲ್ಲಿ ಮೇಯುತ್ತಿರುವಾಗ ವಿಷ ಪೂರಿತ ಬಳ್ಳಿ ಸೇವಿಸಿ 24 ಕುರಿಗಳು ಮೃತಪಟ್ಟಿರುವ ಘಟನೆ ಜರುಗಿದೆ.
ಗ್ರಾಮದ ಹೊರ ವಲಯ ಹಿರೇಮಲ್ಲನಕೆರೆ ರಸ್ತೆ ಹತ್ತಿರದ ಅಡವಿಯಲ್ಲಿ ಮೇಯುತ್ತಿದ್ದ ಕುರಿಗಳು ಅಸ್ವಸ್ಥಗೊಂಡು ಒದ್ದಾಡಲು ಪ್ರಾರಂಭಿಸಿದಾಗ ಕುರಿಗಾರರು ಪಶು ವೈದ್ಯಾಧಿಕಾರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪಶು ವೈದ್ಯಾಧಿಕಾರಿ ಡಾ. ಎಂ. ದರ್ಶನ್ ಅಸ್ವಸ್ಥಗೊಂಡಿದ್ದ ಎಲ್ಲ ಕುರಿಗಳಿಗೆ ಚಿಕಿತ್ಸೆ ನೀಡಿ 35 ಕುರಿಗಳನ್ನು ಸಾವಿನಿಂದ ಪಾರು ಮಾಡಿದರು. ತೀವ್ರ ಅಸ್ವಸ್ಥಗೊಂಡಿದ್ದ ಕೆ.ನಿಂಗರಾಜ, ಪರಸಪ್ಪ, ಸಿದ್ದಪ್ಪ, ಅಂಜಿನಿ, ಶಿವರಾಜ, ಹಾಲೇಶ, ಹನುಮಂತ, ಮರಿಯಜ್ಜ, ಎಚ್.ರಾಮು, ರುದ್ರಪ್ಪ, ಬಸಣ್ಣ ಎಂಬುವವರಿಗೆ ಸೇರಿದ ಒಟ್ಟು 24 ಕುರಿಗಳು ಸಾವಿಗೀಡಾಗಿವೆ.
ಸಂಜೆ ವೇಳೆ ಕುರಿಗಳು ವಿಷಪೂರಿತ ಗಿಡದ ಎಲೆಗಳನ್ನು ಸೇವಿಸಿರುವ ಶಂಕೆ ಇದೆ. ಸೂರ್ಯಾಸ್ತದ ನಂತರ ಕುರಿಗಳನ್ನು ಮೇಯಿಸದೇ ಹಟ್ಟಿಯೊಳಗೆ ಕೂಡಿ ಹಾಕುವಂತೆ ಕುರಿಗಾರರಿಗೆ ಸಲಹೆ ನೀಡಿದ್ದೇವೆ ಎಂದು ಡಾ. ದರ್ಶನ್ ತಿಳಿಸಿದರು.