ವಿಷಾಹಾರ ಸೇವಿಸಿ ನಾಲ್ವರು ಅಸ್ವಸ್ಥ

ಮಂಗಳೂರು, ಅ.೨೭- ನಗರದ ಜೆಪ್ಪು ಬಪ್ಪಾಲ್‌ನಲ್ಲಿರುವ ಒಂದೇ ಕುಟುಂಬದ ನಾಲ್ಕು ಮಂದಿ ವಿಷಾಹಾರ ಸೇವನೆಯಿಂದ ಅಸ್ವಸ್ಥಗೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಸದ್ಯ ಅಸ್ವಸ್ಥಗೊಂಡವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪ್ಪು ಬಪ್ಪಾಲ್‌ನ ನಿವಾಸಿಗಳಾದ ಅರವಿಂದರಾವ್ (52) ಮತ್ತು ಪ್ರಭಾವತಿ (45) ಹಾಗೂ ಸೌರಭ್ (20), ಪ್ರತೀಕ್ (18) ಎಂಬವರು ಮಂಗಳವಾರ ರಾತ್ರಿ ಹೆಸರು ಬೇಳೆ ಹಾಗೂ ಐಸ್‌ಕ್ರೀಂ ತಿಂದು ಮಲಗಿದ್ದರು ಎನ್ನಲಾಗಿದೆ. ಆದರೆ ಬುಧವಾರ ಬೆಳಗ್ಗೆ ಬಾಗಿಲು ತೆಗೆಯದ ಕಾರಣ ಸಂಬಂಧಿಕರಾದ ಕೌಶಿಕ್, ಮಂಜುನಾಥ್, ರೇಣುಕಾ ಎಂಬವರು ಬಾಗಿಲು ತೆಗೆಸಿದ್ದರು.

ವಾಂತಿ ಮಾಡಿಕೊಂಡಿದ್ದ ನಾಲ್ಕು ಮಂದಿಯನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದ್ದು, ನಾಲ್ಕು ಮಂದಿಯೂ ಅಪಾಯದಿಂದ ಪಾರಾಗಿದ್ದಾರೆ ಎಂದು ಪರೀಕ್ಷಿಸಿದ ವೈದ್ಯರು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಹೆಸರು ಬೇಳೆ ಮತ್ತು ಐಸ್‌ಕ್ರೀಂ ತಿಂದ ಬಳಿಕ ಅಸ್ವಸ್ಥಗೊಂಡಿದ್ದೇವೆ. ನಾವು ಯಾವುದೇ ವಿಷಪದಾರ್ಥ ಸೇವಿಸಿಲ್ಲ ಎಂದು ನಾಲ್ಕು ಮಂದಿ ಹೇಳಿದ್ದಾರೆ. ವೈದ್ಯರ ಪ್ರಾಥಮಿಕ ವರದಿಯನ್ನು ನಿರೀಕ್ಷಿಸುತ್ತಿದ್ದೇವೆ. ಪಾಂಡೇಶ್ವರ ಪೊಲೀಸರು ಆಸ್ಪತ್ರೆಯಲ್ಲೇ ಇದ್ದು, ತನಿಖೆ ನಡೆಸಲಾಗುತ್ತಿದೆ.

-ಶಶಿಕುಮಾರ್, ಪೊಲೀಸ್ ಆಯುಕ್ತ