ವಿಷಾಹಾರ ಸೇವನೆ ವಿದ್ಯಾರ್ಥಿಗಳು ಅಸ್ವಸ್ಥ

ಚಿತ್ರದುರ್ಗ, ಜು.೨೩: ಆಹಾರ ಸೇವನೆ ಮಾಡಿದ ೧೦ಕ್ಕೂ ವಿದ್ಯಾರ್ಥಿನಿಗಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ಪಟಣ್ಣದಲ್ಲಿರುವ ಮೆಟ್ರೀಕ್ ಪೂರ್ವ ಬಿಸಿಎಂ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಕಳೆದ ರಾತ್ರಿ ಸಂಭವಿಸಿದೆ.

ಪಟ್ಟಣದ ಮೆಟ್ರೀಕ್ ಪೂರ್ವ ಬಿಸಿಎಂ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ೮,೯,೧೦ ನೇ ತರಗತಿ ವಿದ್ಯಾರ್ಥಿನಿಯರು ರಾತ್ರಿ ಪಾಯಸ, ಅನ್ನ ಸಾಂಬರ್ ಸೇವಿಸಿದ್ದು, ಒಂದು ಗಂಟೆಯ ನಂತರ ವಿದ್ಯಾರ್ಥಿನಿಯರು ಹೊಟ್ಟೆ ನೊವ್ವು ಎಂದು ಬಳಲಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿನಿಯರನ್ನು ತಕ್ಷಣವೇ ಹೊಳಲ್ಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿನಿಲಯದ ೫೩ ವಿದ್ಯಾರ್ಥಿನಿಯರಲ್ಲಿ ೧೩ ವಿದ್ಯಾರ್ಥಿಗಳು ಊಟ ಸೇವಿಸಿ ಅಸ್ವಸ್ಥಗೊಂಡಿದ್ದು, ಯಾವುದೇ ಪ್ರಾಣಪಯ ಸಂಭವಿಸಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಭರಮಸಾಗರದಲ್ಲಿ ಬಿಸಿಯೂಟ ಸೇವನೆ ಮಾಡಿ ೮೦ ವಿದ್ಯಾರ್ಥಿಗಳು ಅಸ್ವಸ್ಥತೆರಾಗಿದ್ದರು, ಇನ್ನೂ ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿರುವುದು ಪೋಷಕರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ.