ವಿಷಪ್ರಾಶನದಿಂದ ಯುವಕ ಸಾವು: ಆಸ್ಪತ್ರೆಗೆ ಕರೆತಂದ ಯುವತಿ ಮೇಲೆ ಶಂಕೆ

ಕಲಬುರಗಿ :ಆ.3: ಆಳಂದ ಪಟ್ಟಣದಲ್ಲಿ ಯುವಕನೋರ್ವ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಯುವತಿಯೇ ವಿಷ ಹಾಕಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಪ್ರವೀಣ್ ಮೂಲಭಾರತಿ ಮೃತ ಯುವಕ. ಪೂಜಾ ಎಂಬ ಯುವತಿ ವಿಷ ಹಾಕಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆಳಂದ ಪಟ್ಟಣದ ಜ್ಯೋತಿಭಾ ಫುಲೆ ನಗರದಲ್ಲಿರುವ ತನ್ನ ಮನೆಯಲ್ಲಿ ಇಂದು ಯುವಕನಿಗೆ ವಿಷ ಹಾಕಿದ ಯುವತಿ, ನಂತರ ತಾನೇ ತಾಲೂಕು ಆಸ್ಪತ್ರೆ ಕರೆತಂದು ದಾಖಲು ಮಾಡಿದ್ದಾರೆ.
ಪ್ರವೀಣ್‌ನ ಸಂಬಂಧಿಕರಿಗೆ ಮಾಹಿತಿ ತಿಳಿದು ಆಸ್ಪತ್ರೆಗೆ ದೌಡಾಯಿಸುತ್ತಿದ್ದಂತೆ ಯುವತಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಬಂಧನಕ್ಕೆ ಜಾಲ ಬೀಸಿದ್ದಾರೆ.